ADVERTISEMENT

ಗುಬ್ಬಿ: ವಿಷ ಹಾಕಿ ಮರ ಒಣಗಿಸಿಲ್ಲ; ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಆರೋಪ ಸಾಬೀತಾದರೆ ಶಿಕ್ಷೆ ಅನುಭವಿಸಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:38 IST
Last Updated 4 ಅಕ್ಟೋಬರ್ 2020, 16:38 IST
ಗುಬ್ಬಿ ಪಟ್ಟಣ ಪಂಚಾಯಿತಿ ಕಾರ್ಯಾಲಯ
ಗುಬ್ಬಿ ಪಟ್ಟಣ ಪಂಚಾಯಿತಿ ಕಾರ್ಯಾಲಯ   

ಗುಬ್ಬಿ: ‘ಮರ ಬೆಳೆಸಲು ಉತ್ತೇಜಿಸುವ ನಾವು, ಮರ ಕಡಿಯಲು ಎಂದೂ ಪ್ರೋತ್ಸಾಹಿಸುವುದಿಲ್ಲ. ಪದೇ ಪದೇ ಉಂಟಾಗುತ್ತಿದ್ದ ವಿದ್ಯುತ್ ಅವಘಡವನ್ನು ತಡೆಯಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಒಣಗಿದ ಮರ ಕಡಿಯಲಾಯಿತು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ ಬಿ ತೀರ್ಥಪ್ರಸಾದ್‌ ಹೇಳಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿದ್ದ ಮರ ಕಡಿದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮರದ ಬುಡವೆಲ್ಲ ಹಾಳಾಗಿ ಹೋಗಿತ್ತು. ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದುದರಿಂದ ಅನಾಹುತ ಆಗಬಾರದೆಂಬ ಉದ್ದೇಶಕ್ಕೆ ಮರ ಕಡಿಯಲಾಗಿದೆ’ ಎಂದರು.

‘ಮರಕ್ಕೆ ವಿಷ ಹಾಕಿ ಒಣಗುವಂತೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಆರೋಪ ರುಜುವಾದರೆ ಯಾವುದೇ ಶಿಸ್ತು ಕ್ರಮ ಎದುರಿಸಲು ಸಿದ್ಧ. ಮರ ಕಡಿದ ನಂತರ ವಲಯ ಅರಣ್ಯಾಧಿಕಾರಿಗೆ ವಿಷಯ ತಿಳಿಸಿ ಮರದ ತುಂಡುಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಿದ್ದೇವೆ’ ಎಂದರು.

ADVERTISEMENT

ಗುಬ್ಬಿ ವಲಯ ಅರಣ್ಯಾಧಿಕಾರಿಗಳಾದ ರವಿ ಮಾತನಾಡಿ, ‘ನಮ್ಮ ಇಲಾಖೆ ಗಮನಕ್ಕೆ ತರದೇ ಮರ ಕಡಿದಿರುವುದು ಸರಿಯಿಲ್ಲ. ಮರ ಕಡಿದ ಉದ್ದೇಶ ಏನೇ ಇದ್ದರೂ, ಕಡಿಯಲು ಅನುಸರಿಸಿದ ಕ್ರಮವನ್ನು ಒಪ್ಪಲಾಗುವುದಿಲ್ಲ. ಸ್ಥಳ ಪರಿಶೀಲಿಸಿ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಮರಕ್ಕೆ ವಿಷ ಹಾಕಿರುವುದನ್ನು ಖಾತರಿಪಡಿಸಿಕೊಳ್ಳಲು ಕಡಿದಿರುವ ಮರದ ಬುಡದ ಮಾದರಿ ಪಡೆದು ಅದನ್ನು ಪರೀಕ್ಷೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಅವರ ಪ್ರತಿಕ್ರಿಯೆ ಆಧರಿಸಿ ಶಿಕ್ಷೆ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.