ADVERTISEMENT

ತಿಪಟೂರು: ₹26 ಸಾವಿರ ಕನಿಷ್ಠ ವೇತನಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:12 IST
Last Updated 10 ಜುಲೈ 2025, 5:12 IST
ತಿಪಟೂರಿನ ಸಿಂಗ್ರಿ ನಂಜಪ್ಪ ವೃತ್ತದ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು 
ತಿಪಟೂರಿನ ಸಿಂಗ್ರಿ ನಂಜಪ್ಪ ವೃತ್ತದ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು    

ತಿಪಟೂರು: ಅಂಗನವಾಡಿ ನೌಕರ ಸಂಘ, ಕೊಬ್ಬರಿ ಮಾರುಕಟ್ಟೆ ಶ್ರಮಿಕರ ಸಂಘ, ಕೆಪಿಆರ್‌ಎಸ್, ಎಪಿಎಂಸಿ ಹಮಾಲಿ ಕೂಲಿ ಕಾರ್ಮಿಕರ ಸಂಘ, ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು, ಬಿಸಿಯೂಟ ನೌಕರರು, ಗ್ರಾಮ ಪಂಚಾಯಿತಿ ನೌಕರರ ಸಂಘ, ಸ್ವಚ್ಛತಾ ವಾಹಿನಿ ಸಂಘದವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕೆಂಪಮ್ಮ ದೇವಿ ದೇವಾಸ್ಥಾನದಿಂದ ಹೊರಟು ನಗರದ ಸಿಂಗ್ರಿ ನಂಜಪ್ಪ ವೃತ್ತದವರೆಗೆ ನಡೆಸಿ ಪ್ರತಿಭಟನಾ ಮೆರವಣಿಗೆ ನಡಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಅನುಸೂಯಮ್ಮ ಮಾತನಾಡಿ, ಜಿಲ್ಲೆಯ ಮಿನಿ ಅಂಗನವಾಡಿಗಳನ್ನು ಉನ್ನತೀಕರಿಸಲಾಗಿದ್ದು, ತಾಲ್ಲೂಕಿನಲ್ಲಿ ಉನ್ನತೀಕರಿಸಲು ಮೀನಾವೇಶ ಎಣಿಸಲಾಗುತ್ತಿದೆ. ಅಂಗನವಾಡಿ ನೌಕರರಿಗೆ ಕನಿಷ್ಠ ₹26 ಸಾವಿರ ವೇತನ ಹಾಗೂ ಮಾಸಿಕ ಪಿಂಚಣಿ ₹10 ಸಾವಿರ ಕೊಡಬೇಕು. 2011ರಿಂದ ನಿವೃತ್ತಿ ಆದ ಎಲ್ಲಾ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು. ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಎಲ್‌ಕೆಜಿ ತೆರೆದು ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಚನ್ನಬಸವಣ್ಣ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ 200 ದಿನ ಕೆಲಸ, ದಿನಕ್ಕೆ ₹600 ಕೂಲಿ ನಿಗದಿಪಡಿಸಬೇಕು. ಉಚಿತ ಶಿಕ್ಷಣ, ಆರೋಗ್ಯದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂ ಎಲ್ಲರಿಗೂ ವಸತಿ ಖಾತ್ರಿಪಡಿಸಬೇಕು. ನೂತನ ಶಿಕ್ಷಣ ನೀತಿ-2020ನ್ನು ರದ್ದುಪಡಿಸಬೇಕು. ಕಾರ್ಪೊರೇಟ್ ತೆರಿಗೆ ಹೆಚ್ಚಿಸಿ ಸಂಪನ್ಮೂಲ ಕ್ರೋಡಿಕರಿಸಬೇಕು. ಹಮಾಲಿ ಕಾರ್ಮಿಕರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಭವಿಷ್ಯನಿಧಿ, ಪಿಂಚಣಿ, ಸಹಜ ಮರಣ ಪರಿಹಾರ, ಶಿಕ್ಷಣ ಸಹಾಯ ಮುಂತಾದ ಸಮಗ್ರ ಕಲ್ಯಾಣ ಸೌಲಭ್ಯಗಳನ್ನು ಜಾರಿ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ತೀಮ್ಲಾಪುರ ದೇವರಾಜು, ಸುಬ್ಬಣ್ಣ, ಶ್ರೀಕಾಂತ್ ಕೆಳಹಟ್ಟಿ, ಅಲ್ಲಾಬಕಾಷ್, ಖಚಾಂಚಿ ಗಾಯಿತ್ರಿ ಎಂ.ಜಿ., ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಹಮಾಲಿ ಸಂಘದ ಗಂಗಾಧರ್, ಸುರೇಶ್ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.