ADVERTISEMENT

ತುಮಕೂರು| ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆ ಸಜ್ಜು: ಅಗತ್ಯ ಸಾಮಗ್ರಿ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:02 IST
Last Updated 22 ಡಿಸೆಂಬರ್ 2025, 7:02 IST
ತುಮಕೂರಿನ ಸ್ವಾತಂತ್ರ್ಯ ಚೌಕದ ಬಳಿಯ ಸಿಎಸ್‌ಐ ವೆಸ್ಲಿ ಚರ್ಚ್‌ಗೆ ಕ್ರಿಸ್‌ಮಸ್‌ ಪ್ರಯುಕ್ತ ದೀಪಾಲಂಕಾರ ಮಾಡಲಾಗಿದೆ
ತುಮಕೂರಿನ ಸ್ವಾತಂತ್ರ್ಯ ಚೌಕದ ಬಳಿಯ ಸಿಎಸ್‌ಐ ವೆಸ್ಲಿ ಚರ್ಚ್‌ಗೆ ಕ್ರಿಸ್‌ಮಸ್‌ ಪ್ರಯುಕ್ತ ದೀಪಾಲಂಕಾರ ಮಾಡಲಾಗಿದೆ   

ತುಮಕೂರು: ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆಯ ಚರ್ಚ್‌ಗಳು ಸಿದ್ಧಗೊಳ್ಳುತ್ತಿವೆ. ಮಾರುಕಟ್ಟೆಯಲ್ಲಿ ವ್ಯಾಪಾರ–ವಹಿವಾಟು ಚುರುಕು ಪಡೆದಿದ್ದು, ಹೆಚ್ಚಿನ ಜನ ಸಂದಣಿ ಕಾಣಿಸುತ್ತಿದೆ. ಅಲಂಕಾರಿಕ ವಸ್ತು ಖರೀದಿಗೆ ಮುಂದಾದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

‘ಸಾಂತಾ ಕ್ಲಾಸ್‌’ ಸ್ವಾಗತಕ್ಕೆ ಚಿಣ್ಣರು ಸೇರಿದಂತೆ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಹಬಕ್ಕೆ ನಾಲ್ಕು–ಐದು ದಿನ ಬಾಕಿ ಇರುವಾಗಲೇ ಅಗತ್ಯ ಸಾಮಗ್ರಿ ಖರೀದಿ ಜೋರಾಗಿದೆ. ಸಾಂತಾ ಕ್ಲಾಸ್‌ ವೇಷದ ಆಭರಣ, ವಿಶೇಷ ಉಡುಪು, ಹೊಸ ಬಟ್ಟೆ, ಕ್ರಿಸ್‌ಮಸ್ ಗಿಡಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ಹಬ್ಬದ ಸಮಯದಲ್ಲಿ ಹಿರಿಯರು ಮಕ್ಕಳಿಗೆ ಉಡುಗೊರೆ ನೀಡುತ್ತಾರೆ. ಈ ವರ್ಷ ಏನು ಉಡುಗೊರೆ ಸಿಗಬಹುದು ಎಂದು ಮಕ್ಕಳು ಮನಸ್ಸಿನಲ್ಲಿಯೇ ಎಣಿಸುತ್ತಿದ್ದಾರೆ.

ಸ್ವಾತಂತ್ರ್ಯ ಚೌಕದ ಬಳಿಯ ಸಿಎಸ್‌ಐ ವೆಸ್ಲಿ ಚರ್ಚ್‌, ಹೊರಪೇಟೆ ಲೂರ್ದು ಮಾತೆ ಚರ್ಚ್‌ ಒಳಗೊಂಡಂತೆ ಎಲ್ಲ ಚರ್ಚ್‌ಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹಬ್ಬದ ಆಚರಣೆಗೆ ಪೂರ್ವ ತಯಾರಿಯೂ ನಡೆಯತ್ತಿದೆ. ಗೋದಲಿ ನಿರ್ಮಾಣ ಕಾರ್ಯ ವೇಗ ಪಡೆದಿದೆ. ಡಿ. 25ರಂದು ಹಬ್ಬ ಆಚರಿಸಲಿದ್ದು, ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬೆಳಿಗ್ಗೆಯಿಂದಲೇ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಬೆಲೆ ಏರಿಕೆ: ಮನೆ, ಚರ್ಚ್‌ ಅಲಂಕಾರಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರ ದುಬಾರಿಯಾಗಿದೆ. ಕ್ರಿಸ್‌ಮಸ್‌ ಗಿಡ, ಸ್ಟಾರ್ಸ್‌, ಆಕಾಶ ಬುಟ್ಟಿಗಳ ಬೆಲೆಯೂ ಹೆಚ್ಚಾಗಿದೆ. ಪ್ರತಿ ವಸ್ತುವಿನ ಬೆಲೆಯಲ್ಲಿ ₹100 ರಿಂದ ₹200 ಜಾಸ್ತಿಯಾಗಿದೆ. ಕ್ರಿಸ್‌ಮಸ್‌ ಗಿಡ ₹200 ರಿಂದ ಶುರುವಾಗಿ ₹3,500ರ ವರೆಗೂ ಮಾರಾಟವಾಗುತ್ತಿದೆ.

ಇಂದಿನ ಪೀಳಿಗೆಗೆ ಏಸು ನೆಲೆಸಿದ್ದ ವಾತಾವರಣ ತಿಳಿಸುವ ಉದ್ದೇಶದಿಂದ ಚರ್ಚ್‌ ಮತ್ತು ಮನೆಗಳಲ್ಲಿ ಹತ್ತು ವಿಧಗಳಲ್ಲಿ ಚಿಕ್ಕದಾಗಿ ಗೋದಲಿ (ಗುಡಿಸಲು) ನಿರ್ಮಿಸಲಾಗುತ್ತದೆ. ಇದು ಏಸುವಿನ ಬೆಳವಣಿಗೆ, ಬದುಕಿನ ಬಗ್ಗೆ ತಿಳಿಸುತ್ತದೆ. ಮನೆಗಳಲ್ಲಿ ಕ್ರಿಸ್‌ಮಸ್‌ ಕೇಕ್‌, ಕಜ್ಜಾಯ, ಕಲ್ಕಲ ತಯಾರಿ ಕಾರ್ಯವೂ ನಡೆಯುತ್ತಿದೆ.

ಕ್ರಿಸ್‌ಮಸ್‌ ಪ್ರಯುಕ್ತ ಡಿ. 2ರಿಂದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಪ್ರತಿ ವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಾನುವಾರ ‘ವೈಟ್‌ ಕ್ರಿಸ್‌ಮಸ್‌’ ಆಚರಿಸಲಾಯಿತು. ಮಹಿಳೆಯರು, ಮಕ್ಕಳು, ಯುವಕರು ಒಳಗೊಂಡಂತೆ ಎಲ್ಲರು ಭಾಗವಹಿಸಿದ್ದರು.

ಅಗತ್ಯ ತಯಾರಿ: ಚರ್ಚ್‌ನಲ್ಲಿ ಹಬ್ಬ ಆಚರಣೆಗೆ ಪೂರಕವಾದ ಕೆಲಸ ನಡೆಯುತ್ತಿದೆ. ಚರ್ಚ್‌ ಆವರಣದಲ್ಲಿ ಗೋದಲಿ ನಿರ್ಮಿಸಲು ಕೇರಳದಿಂದ ಅಲಂಕಾರಿಕ ವಸ್ತು ಸಾಮಗ್ರಿ ತರಿಸಲಾಗಿದೆ. ಏಸುಕ್ರಿಸ್ತನ ಜೀವನದ ಚಿತ್ರಣ ಕಟ್ಟಿ ಕೊಡಲಾಗುವುದು. ಡಿ. 25ರಂದು ಬೆಳಿಗ್ಗೆ 8.30 ಗಂಟೆಯಿಂದ ವಿಶೇಷ ಪ್ರಾರ್ಥನೆ ನೆರವೇರಲಿದೆ. ಇಡೀ ದಿನ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾರ್ಗನ್‌ ಸಂದೇಶ್‌ ಸಭಾ ಪಾಲಕರು ಸಿಎಸ್‌ಐ ವೆಸ್ಲಿ ಚರ್ಚ್‌