ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿ.ವಿ ಅಧ್ಯಾಪಕರ ಸಂಘದಿಂದ ‘ವಿಕಸಿತ ಭಾರತಕ್ಕಾಗಿ ಶಿಕ್ಷಣ’ ವಿಷಯ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಹಂಪಿ ವಿ.ವಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ, ತುಮಕೂರು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಇತರರು ಪಾಲ್ಗೊಂಡಿದ್ದರು
ತುಮಕೂರು: ವಂಚಿತ ಸಮುದಾಯ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕು. ವಿಕಸಿತ ಭಾರತದ ಗುರಿ ಮುಟ್ಟಲು ಶಿಕ್ಷಣ ಮಹತ್ವದ ಪಾತ್ರ ವಹಿಸಲಿದೆ ಎಂದು ಹಂಪಿ ವಿ.ವಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತುಮಕೂರು ವಿ.ವಿ ಅಧ್ಯಾಪಕರ ಸಂಘದಿಂದ ಆಯೋಜಿಸಿದ್ದ ‘ವಿಕಸಿತ ಭಾರತಕ್ಕಾಗಿ ಶಿಕ್ಷಣ’ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
2047ರ ವಿಕಸಿತ ಭಾರತಕ್ಕೆ ಎಂತಹ ಶಿಕ್ಷಣ ಬೇಕು ಎಂಬ ನೀಲನಕ್ಷೆ ಅಗತ್ಯ. ಇದು ಬಹುತ್ವ ಭಾರತ. ಆಶ್ರಮದಿಂದ, ಗುರುಕುಲ ಈಗ ಸ್ವತಂತ್ರ ಸಂಸ್ಥೆ. ಶಿಕ್ಷಣ ವ್ಯವಸ್ಥೆ ಬದಲಾಗಿ, ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದರು.
ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ‘ವಿಚಾರ ಸಂಕಿರಣದ ಚರ್ಚಿತ ವಿಷಯ ಆಚರಣೆಗೆ ಬರಬೇಕು. ಅನೇಕ ಸವಾಲು ಮಧ್ಯೆ ಕೃಷಿ, ವಿಜ್ಞಾನ–ತಂತ್ರಜ್ಞಾನ, ವಾಣಿಜ್ಯ, ಕೈಗಾರಿಕೆ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಿದೆ. ವಿಕಸಿತ ಭಾರತ ಬದಲಾಗುತ್ತಿದೆ. ದೇಶದ ಸುಸ್ಥಿರ ಅಭಿವೃದ್ಧಿಗೆ ಉನ್ನತ ಶಿಕ್ಷಣ ಪೂರಕವಾಗಲಿ’ ಎಂದು ಆಶಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಕೆ.ರಾಮಕೃಷ್ಣ ರೆಡ್ಡಿ, ‘ವಿದ್ಯಾರ್ಥಿ ಮತ್ತು ಶಿಕ್ಷಕ ಇಬ್ಬರಿಗೂ ವಿಚಾರ ಸಂಕಿರಣ ಅನುಕೂಲವಾಗಲಿದೆ. ಪ್ರಚಲಿತ ವಿದ್ಯಮಾನ ಚರ್ಚಿಸಲು ಶೈಕ್ಷಣಿಕ ಸಮ್ಮೇಳನ ವೇದಿಕೆಯಾಗಿದೆ’ ಎಂದು ಹೇಳಿದರು.
ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಜಂಟಿ ಕಾರ್ಯದರ್ಶಿ ಗುಂತಾ ಲಕ್ಷ್ಮಣ, ಜೆಎನ್‍ಯು ವಿ.ವಿಯ ಪ್ರೊ.ರಮೇಶ ಸಾಲಿಯಾನ, ಮೈಸೂರಿನ ಮುಕ್ತ ವಿ.ವಿಯ ಆರ್.ಎಚ್.ಪವಿತ್ರಾ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಡಿ.ವಸಂತಾ, ವಿ.ವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಂ.ಎಸ್.ನಾಗರಾಜು, ರಾಜ್ಯ ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಆದಿನಾರಾಯಣ್, ಕಾರ್ಯದರ್ಶಿ ಎಚ್.ಜಿ.ನಾರಾಯಣ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.