ADVERTISEMENT

ಜ.8ರಂದು ಭಾರತ್‌ ಬಂದ್‌ಗೆ ನಿರ್ಧಾರ: ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 6:54 IST
Last Updated 2 ಜನವರಿ 2020, 6:54 IST
ಬಂಧನಕ್ಕೊಳಗಾದ ರೈತ ಮುಖಂಡರು
ಬಂಧನಕ್ಕೊಳಗಾದ ರೈತ ಮುಖಂಡರು   

ತುಮಕೂರು: ತುಮಕೂರಿನ ರೈತ ಸಮಾವೇಶಕ್ಕೆ ತೆರಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದ ಹುಳಿಯಾರು ರೈತಸಂಘದ ಪದಾಧಿಕಾರಿಗಳನ್ನು ಇಲ್ಲಿನ ಪರಿವೀಕ್ಷಣಾ ಮಂದಿರದ ಬಳಿ ಪೊಲೀಸರು ಬಂಧಿಸಿದರು.

ಸ್ವಾಮಿನಾಥನ್ ವರದಿ ಜಾರಿಗೆ ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯ ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಶ್ರೀಲಂಕಾ, ಬಾಂಗ್ಲಾ ಹಾಗೂ ಇತರೆ ದೇಶಗಳಿಂದ ಅಡಕೆ ಮತ್ತು ಕೊಬ್ಬರಿ ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹುಳಿಯಾರಿನ ರೈತ ಮುಖಂಡರು ತುಮಕೂರಿನಲ್ಲಿ ನಡೆಯುವ ರೈತ ಸಮಾವೇಶ ಹಾಗೂ ಕೃಷಿ ಕರ್ಮಣಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು.

ಈ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ಹುಳಿಯಾರು ಪೊಲೀಸರು ಪ್ರತಿಭಟನೆಗೆ ತೆರಳಲು ಮುಂದಾಗಿದ್ದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ಮರುಳಪ್ಪ, ನಾಗಣ್ಣ, ಶಿವಣ್ಣ ಕೆಂಕೆರೆ, ಸತೀಶ್ ಪಾತ್ರೆ, ಲೋಕೇಶ್, ರಘು, ಬನಪ್ಪ ಮತ್ತಿತರರನ್ನು ಪರಿವೀಕ್ಷಣಾ ಮಂದಿರದ ಬಳಿ ತಡೆದು ಬಂಧಿಸಿದ್ದಾರೆ.

ADVERTISEMENT

ಮೋದಿ ವಿರುದ್ಧ ಧಿಕ್ಕಾರ ಕೂಗಿದ ರೈತರನ್ನು ಬಂಧಿಸಿದ ಪೊಲೀಸರು

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತುಮಕೂರು ಜಿಲ್ಲಾ ಮುಖಂಡರನ್ನು ಪೊಲೀಸರು ಬಂಧಿಸಿದರು.

ರೈತ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಸಮೀಪ ಆಗಮಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಮೋದಿ ಸರ್ಕಾರ ರೈತ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ರೈತರನ್ನು ಬಂಧಿಸಿ ಮಧುಗಿರಿಗೆ ಕೊಂಡೊಯ್ದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್, ಕುಣಿಗಲ್ ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಪ್ರಕಾಶ್, ಶಿರಾ ತಾಲ್ಲೂಕು ಅಧ್ಯಕ್ಷ ದ್ಯಾಮೇಗೌಡ ಮತ್ತಿತರರಿದ್ದರು.

ಜ.8 ಭಾರತ್‌ ಬಂದ್‌ಗೆ ನಿರ್ಧಾರ: ಸರ್ಕಾರ ರೈತರ ವಿರುದ್ಧ ಗೂಂಡಾಗಿರಿ ಪ್ರದರ್ಶಿಸುತ್ತಿದೆ. ರೈತರನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ದೇಶದ 200 ರೈತ ಸಂಘಟನೆಗಳು ಪ್ರತಿಭಟನೆ ನಡೆಸುವುದಲ್ಲದೇ, ಜ.8 ರಂದು ಭಾರತ್ ಬಂದ್‌ ನಡೆಸಲು ತೀರ್ಮಾನಿಸುತ್ತಿದ್ದೇವೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.