ADVERTISEMENT

ತುಮಕೂರು: ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್ ರಸ್ತೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:47 IST
Last Updated 30 ಸೆಪ್ಟೆಂಬರ್ 2025, 5:47 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ರೈತರ ಫಲವತ್ತಾದ ಭೂಮಿ ಕಿತ್ತುಕೊಂಡು ನಂದಿಹಳ್ಳಿ– ಮಲ್ಲಸಂದ್ರ, ವಸಂತನರಸಾಪುರ ವರ್ತುಲ ರಸ್ತೆ ನಿರ್ಮಾಣಕ್ಕೆ ರೈತರು ಹಾಗೂ ರೈತ ಸಂಘಟನೆ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಂದಿಹಳ್ಳಿ- ಮಲ್ಲಸಂದ್ರ- ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡು ಪ್ರತಿಭಟನೆಗೆ ಅಣಿಯಾಗಿದ್ದಾರೆ. ಭೂಸ್ವಾಧೀನ ಕಾಯ್ದೆ-2013ಅನ್ನು ಜಿಲ್ಲಾ ಆಡಳಿತ ಸ್ಪಷ್ಟವಾಗಿ ಉಲ್ಲಂಘಿಸಿದೆ. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ಕಾರಣಕ್ಕೂ ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡದಿರಲು ಪಣ ತೊಟ್ಟಿದ್ದಾರೆ.

ಸಂಯುಕ್ತ ಹೋರಾಟ- ಕರ್ನಾಟಕ ಸಂಚಾಲಕ ಸಿ.ಯತಿರಾಜು, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಎಐಕೆಕೆಎಂಎಸ್‍ ಮುಖಂಡ ಎಸ್.ಎನ್.ಸ್ವಾಮಿ, ಎಸ್‌ಕೆಎಂ ಸಂಯೋಜಕ ಬಿ.ಉಮೇಶ್, ಎಐಕೆಎಸ್‍ ಮುಖಂಡ ಕಂಬೇಗೌಡ, ಕೆಪಿಆರ್‌ಎಸ್‍ ಅಜ್ಜಪ್ಪ ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಹೋರಾಟದ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಔಟರ್ ರಿಂಗ್ ರೋಡ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ಕಬಳಿಸುವ ಹುನ್ನಾರ ನಡೆದಿದೆ. ಜಮೀನು ಕಳೆದುಕೊಳ್ಳುವ ಹಳ್ಳಿಗಳಿಗೆ ಭೇಟಿನೀಡಿ ಅ. 4ರಿಂದ 6ರ ವರೆಗೆ ಜಾಗೃತಿ ಜಾಥಾ ನಡೆಸಲಾಗುವುದು. ಅ. 13ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ರಸ್ತೆಗೆ 44 ಹಳ್ಳಿಗಳ ಸುಮಾರು 650 ಎಕರೆ ಜಮೀನು ವಶಪಡಿಸಿಕೊಳ್ಳಲಾಗುತ್ತಿದೆ. 750ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ. ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಸರ್ವೆ ನಡೆಸದೆ ಭೂಸ್ವಾಧೀನಕ್ಕೆ ಮುಂದಾಗಿದೆ ಎಂದು ದೂರಿದರು.

ದಾಬಸ್‍ಪೇಟೆಯಿಂದ ಗುಬ್ಬಿ ವರೆಗೆ ಸುಮಾರು 120 ಅಡಿ ಅಗಲದ ನಕಾಸೆ ರಸ್ತೆ ಇದೆ. ಈ ರಸ್ತೆಯನ್ನು ಔಟರ್ ರಿಂಗ್ ರಸ್ತೆಗೆ ಬಳಸುವಂತೆ ಒತ್ತಾಯಿಸಿದ್ದರೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ರಮೇಶ್ ಭೈರಸಂದ್ರ, ಸಿದ್ದಗಂಗಮ್ಮ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.