
ತುಮಕೂರು: ‘ಅಹಿಂಸೆ, ಸಮಾನತೆ, ಶಾಂತಿ, ಮಾನವೀಯ ಮೌಲ್ಯ ಪ್ರತಿಪಾದಿಸಿದ ವ್ಯಕ್ತಿಯನ್ನು ಒಬ್ಬ ಹಂತಕ ಹತ್ಯೆ ಮಾಡುತ್ತಾನೆ. ಇದು ಒಬ್ಬ ವ್ಯಕ್ತಿಯ ಹತ್ಯೆಯಲ್ಲ. ಮೌಲ್ಯಗಳ ವಿರುದ್ಧದ ದ್ವೇಷ’ ಎಂದು ಹೋರಾಟಗಾರ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ, ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವೀಯ ಮೌಲ್ಯ ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಇಡೀ ಜಗತ್ತಿನ ಆಸ್ತಿ. ಪ್ರಸ್ತುತ ಆಧುನಿಕ ಗೋಡ್ಸೆಗಳು ಸುಳ್ಳು ಹರಡುತ್ತಾ ಗಾಂಧಿಯೇ ಸುಳ್ಳು ಎಂಬ ವಿಚಾರಗಳನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಗಾಂಧೀಜಿ ವಿಚಾರ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಎಲ್ಲರು ಎಚ್ಚರಿಕೆಯಿಂದ ಗಮನಿಸಬೇಕು ಎಂದರು.
ಪರಿಸರವಾದಿ ಸಿ.ಯತಿರಾಜು, ‘ವಸಾಹತುಶಾಹಿ ನೀತಿಗಳಿಗೆ ದೇಶ ಬಲಿಯಾಗುತ್ತಿದೆ. ಗಾಂಧಿಯನ್ನು ಕೊಂದವರು ಸಂವಿಧಾನ ಕೊಲ್ಲಲು ಮುಂದಾಗಿದ್ದಾರೆ. ಸಂವಿಧಾನದ ಆಶಯಗಳಿಗೆ ಗುಂಡು ಹೊಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಗಾಂಧೀಜಿ ವಿಚಾರ ಉಳಿಸುವ ಅಗತ್ಯ ಹೆಚ್ಚಿದೆ’ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಅಸಹಿಷ್ಣುತೆ, ಅಶಾಂತಿ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಯುವ ಸಮೂಹ ಗಾಂಧೀಜಿ ವಿಚಾರಗಳನ್ನು ಹೆಚ್ಚು ಪಾಲಿಸಬೇಕು’ ಎಂದು ಸಲಹೆ ಮಾಡಿದರು.
ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಮುಖಂಡರಾದ ಪಂಡಿತ್ ಜವಾಹರ್, ತಾಜುದ್ದೀನ್ ಷರೀಫ್, ಚಂದ್ರ, ಅರುಣ್, ಕಲ್ಪನಾ, ಎನ್.ಕೆ.ಸುಬ್ರಮಣ್ಯ, ಟಿ.ಜಿ.ಶಿವಲಿಂಗಯ್ಯ, ಅಶ್ವತ್ಥನಾರಾಯಣ್ ಗುಟ್ಟೆ, ಎಚ್.ಗೋವಿಂದಯ್ಯ, ಚಂದ್ರಪ್ಪ, ಇಂತಿಯಾಜ್, ರಾಘವೇಂದ್ರ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.