
ತುಮಕೂರು: ನಗರದ ವೀರಸಾಗರದಲ್ಲಿ ಶನಿವಾರ ಸಂಜೆ ಅಕ್ರಮ ಸಂಬಂಧದ ಶಂಕೆಯಿಂದ ಹೆಂಡತಿ ಮೇಲೆ ಗಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಫರ್ಮಾನ್ ಪಾಷ (30) ಹಲ್ಲೆ ನಡೆಸಿದವರು. ಪತ್ನಿ ಮುಸ್ಕಾನ್ ಬಾನು (25) ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಂತರ ಫರ್ಮಾನ್ ಪಾಷ ಪೊಲೀಸರಿಗೆ ಶರಣಾಗಿದ್ದಾರೆ.
5 ವರ್ಷಗಳ ಹಿಂದೆ ಇವರ ಮದುವೆ ನೆರವೇರಿತ್ತು. ಪತ್ನಿ ಬೇರೆಯವರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪಾಷ ಅನುಮಾನ ವ್ಯಕ್ತಪಡಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ಶನಿವಾರ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಪಾಷ ಮನೆಯಲ್ಲಿದ್ದ ಕಬ್ಬಿಣದ ಆಯುಧದಿಂದ ಮುಸ್ಕಾನ್ ತಲೆ, ಮುಖಕ್ಕೆ ಹೊಡೆದಿದ್ದಾರೆ. ನಂತರ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.
ಇಬ್ಬರ ಗಲಾಟೆ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಸ್ಕಾನ್ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.