
ತುಮಕೂರು: ಷೇರುಗಳ ಮೇಲೆ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ತಾಲ್ಲೂಕಿನ ಗೋವಿಂದಯ್ಯನಪಾಳ್ಯದ ಜಿ.ಟಿ.ರಘುನಾಥ್ ಎಂಬುವರಿಗೆ ₹19.50 ಲಕ್ಷ ವಂಚಿಸಲಾಗಿದೆ.
ವಾಟ್ಸ್ ಆ್ಯಪ್ ಮೂಲಕ ಪರಿಚಯವಾದ ಆರೋಪಿಗಳು ‘A152 Monarch Global Capital Forum’ ಎಂಬ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಹಣ ಹೂಡಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತರರು ತಮಗೆ ಲಾಭ ಬಂದಿರುವ ಬಗ್ಗೆಯೂ ಗ್ರೂಪ್‌ನಲ್ಲಿ ಚರ್ಚಿಸಿದ್ದಾರೆ. ಇದರ ನಂತರ ರಘುನಾಥ್ ‘Monarch Fin’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪಾನ್ ನಂಬರ್, ಅಗತ್ಯ ವಿವರ ಸಲ್ಲಿಸಿ ಖಾತೆ ತೆರೆದಿದ್ದಾರೆ.
ಮೊದಲ ಬಾರಿಗೆ ₹10 ಸಾವಿರ ವರ್ಗಾಯಿಸಿದ್ದು, ಆ್ಯಪ್‌ನ ಖಾತೆಯಲ್ಲಿ ₹392 ಲಾಭ ಬಂದಿರುವುದಾಗಿ ತೋರಿಸಿದೆ. ಇದನ್ನು ನಂಬಿ ಮತ್ತೆ ₹5 ಲಕ್ಷ ವರ್ಗಾಯಿಸಿದ್ದಾರೆ. ₹2,18,262 ಲಾಭ ತೋರಿಸಿದೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ವಂಚಕರು ತಿಳಿಸಿದ್ದಾರೆ. ರಘುನಾಥ್ ಹಂತ ಹಂತವಾಗಿ ಒಟ್ಟು ₹19.50 ಲಕ್ಷ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಖಾತೆಯಿಂದ ಹಣ ವಿತ್ ಡ್ರಾ ಮಾಡಿಕೊಳ್ಳಲು ಹೋದಾಗ ಆರೋಪಿಗಳು ‘ಸೆಬಿ ನಿಯಮದ ಪ್ರಕಾರ ಪೂರ್ತಿ ಹಣ ಪಡೆಯಲು ₹11.62 ಲಕ್ಷ ಕಮಿಷನ್ ನೀಡಬೇಕು. ಆಗ ಮಾತ್ರ ವಾಪಸ್ ನೀಡಲಾಗುವುದು’ ಎಂದಿದ್ದಾರೆ. ವಂಚನೆಗೆ ಒಳಗಾದ ವಿಷಯ ತಿಳಿದ ನಂತರ ರಘುನಾಥ್ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.