
ತುಮಕೂರು: ಮಹಾ ಶಿವರಾತ್ರಿ ಅಂಗವಾಗಿ ಭಾನುವಾರ ದೇವಾಲಯ, ಮನೆಗಳಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು. ಜನರು ಶಿವನ ನಾಮ ಜಪಿಸಿದರು.
ಶಿವನ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಬೆಳಗಿನ ಜಾವದಿಂದ ರುದ್ರಾಭಿಷೇಕ, ಅಭಿಷೇಕ, ಗಂಗಾಪೂಜೆ, ಕಲಶಾಭಿಷೇಕ ಏರ್ಪಡಿಸಲಾಗಿತ್ತು. ದೇಗುಲಗಳು ಭಕ್ತರಿಂದ ತುಂಬಿದ್ದವು. ಭಕ್ತರು ಬೆಳಿಗ್ಗೆಯಿಂದ ದೇವಸ್ಥಾನಗಳ ಕಡೆಗೆ ಹೆಜ್ಜೆ ಹಾಕಿದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಶೇಷ ಪೂಜೆ ಮಾಡಿಸಿದರು.
ಭದ್ರಮ್ಮ ಛತ್ರ ವೃತ್ತದ ಬಳಿಯ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವ 4 ಗಂಟೆಯಿಂದ ರುದ್ರಾಭಿಷೇಕ ನಡೆಯಿತು. ಬೆಳಿಗ್ಗೆ 6ರಿಂದ ರಾತ್ರಿ 11 ಗಂಟೆಯ ತನಕ ಕಲಶಾಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಿಸಿಲು ಹೆಚ್ಚಾಗುತ್ತಿರುವುದರಿಂದ ಭಕ್ತರು, ಬೆಳಿಗ್ಗೆಯೇ ದೇವರ ದರ್ಶನಕ್ಕೆ ತೆರಳಿದ್ದರು. ಸಂಜೆಯ ನಂತರವೂ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ಬಟವಾಡಿ ಎಪಿಎಂಸಿ ಯಾರ್ಡ್‌ನ ಪಶುಪತಿನಾಥ ದೇವಾಲಯದಲ್ಲಿ ದೇವಸ್ಥಾನ ಸಮಿತಿ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಾಮೂಹಿಕ ಕ್ಷೀರಾಭಿಷೇಕ ನಡೆಯಿತು. ಇಡೀ ದಿನ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಲವು ದೇವಾಲಯಗಳಲ್ಲಿ ನಡೆದ ಜಾಗರಣೆ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಅಮರಜ್ಯೋತಿ ನಗರದ ಸಾಯಿಬಾಬಾ ದೇವಾಲಯ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ, ನಮಿಸಲಾಯಿತು. ಸಿದ್ದರಾಮೇಶ್ವರ ಬಡಾವಣೆಯ ಶಿವ ಸುಬ್ರಹ್ಮಣ್ಯ ಗಣಪತಿ ದೇವಾಲಯ, ಈಶ್ವರ ದೇವಸ್ಥಾನ, ಹೊರಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಸರಸ್ವತಿಪುರಂ ಪ್ರದೇಶದ ಶಿವನ ದೇಗುಲಗಳಲ್ಲಿ ಭಕ್ತರ ಕಲರವ ಕಂಡು ಬಂತು.
ಭಕ್ತರು ಶಿವರಾತ್ರಿ ದಿನ ಉಪವಾಸವಿದ್ದು, ಜಾಗರಣೆ ನಡೆಸಿದರು. ನಗರದ ಬೆಳಗುಂಬ ರಸ್ತೆಯ ಸರಪಳಿ ಮಠದಲ್ಲಿ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕ್ಯಾತ್ಸಂದ್ರದ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ಅರಿಯೂರು ಗ್ರಾಮದಲ್ಲಿ ವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿ ರಥೋತ್ಸವ ಕಣ್ತುಂಬಿಕೊಂಡರು. ರಥಕ್ಕೆ ಬಾಳೆಹಣ್ಣು, ದವನ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.