
ತುಮಕೂರು: ಈ ವಾರ ಶೇಂಗಾ ಬೆಲೆ ಗಗನಮುಖಿಯಾಗಿದ್ದು, ಕೆ.ಜಿ ₹200ಕ್ಕೆ ಹೆಚ್ಚಳವಾಗಿದ್ದು, ಬ್ಯಾಡಗಿ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ. ಬೇಳೆ ಕಾಳುಗಳು ಏರಿಕೆಯತ್ತ ಮುಖ ಮಾಡಿವೆ. ತರಕಾರಿ, ಸೊಪ್ಪು ದರ ತೀವ್ರ ಕುಸಿತ ಕಂಡಿದೆ. ದುಬಾರಿಯಾಗಿದ್ದ ಕೋಳಿ ಮಾಂಸ ಇಳಿಕೆಯತ್ತ ಸಾಗಿದೆ.
ಕಳೆದ ಕೆಲ ವಾರಗಳಿಂದ ತಗ್ಗಿದ್ದ ತರಕಾರಿ ದರ ಈಗ ಮತ್ತಷ್ಟು ಅಗ್ಗವಾಗಿದೆ. ಹಸಿರು ಮೆಣಸಿನಕಾಯಿ ಹೊರತುಪಡಿಸಿದರೆ ಬಹುತೇಕ ತರಕಾರಿಗಳ ಬೆಲೆ ಕೆ.ಜಿ ₹50ಕ್ಕಿಂತ ಕಡಿಮೆ ಇದೆ. ಬೀನ್ಸ್, ಕ್ಯಾರೇಟ್, ಬಿಟ್ರೂಟ್, ಆಲೂಗೆಡ್ಡೆ, ಗೆಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ನುಗ್ಗೆಕಾಯಿ, ಸೌತೆಕಾಯಿ, ಶುಂಠಿ ಕಡಿಮೆಯಾಗಿದೆ. ಬೆಳ್ಳುಳ್ಳಿ ಒಮ್ಮೆಲೆ ಕೆ.ಜಿ.ಗೆ ₹50 ಇಳಿಕೆ ದಾಖಲಿಸಿದೆ. ಈರುಳ್ಳಿ, ಟೊಮೆಟೊ ಸಹ ಕುಸಿದಿದೆ.
ಸೊಪ್ಪು ಇಳಿಕೆ: ಕೆಲವು ವಾರಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದ ಸೊಪ್ಪಿನ ಧಾರಣೆ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30ಕ್ಕೆ, ಸಬ್ಬಕ್ಕಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ತಗ್ಗಿದೆ.
ಹಣ್ಣುಗಳು: ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ದಾಳಿಂಬೆ, ಕರಬೂಜ ತುಸು ತಗ್ಗಿದ್ದು, ಬಾಳೆಹಣ್ಣು, ಪೈನಾಪಲ್ ಅಲ್ಪ ಏರಿಕೆಯಾಗಿದೆ.
ಅಡುಗೆ ಎಣ್ಣೆ ಹೆಚ್ಚಳ: ಎಣ್ಣೆ ದರ ಏರಿಕೆಯತ್ತ ಮುಖ ಮಾಡಿದೆ. ಶೇಂಗಾ ಬೀಜದ ಬೆಲೆ ದುಬಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಎಣ್ಣೆ ಗಗನಮುಖಿಯಾಗಲಿದೆ ಎಂದು ಹೇಳಲಾಗುತ್ತಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹162–165, ಪಾಮಾಯಿಲ್ ಕೆ.ಜಿ ₹125–127, ಕಡಲೆಕಾಯಿ ಎಣ್ಣೆ ಕೆ.ಜಿ ₹165–170ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಶೇಂಗಾ, ಬೇಳೆ ದುಬಾರಿ: ಶೇಂಗಾ ಉತ್ಪಾದನೆ ತೀವ್ರವಾಗಿ ಕುಸಿದಿದ್ದು, ಬೆಲೆ ಗಗನಮುಖಿಯಾಗಿದೆ. ಕಳೆದ ಕೆಲವು ವಾರಗಳಿಂದ ಏರಿಕೆಯತ್ತ ಸಾಗಿದ್ದು, ಈಗ ಒಮ್ಮೆಲೆ ಕೆ.ಜಿ.ಗೆ ₹50 ಹೆಚ್ಚಳವಾಗಿದೆ. ಪ್ರಸ್ತುತ ಕೆ.ಜಿ ₹200ಕ್ಕೆ ಜಿಗಿದಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಬೇಳೆ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದು ಬೆಲೆ ಇಳಿಕೆಯಾಗಬೇಕಿತ್ತು. ಆದರೆ ಈ ಬಾರಿ ಉತ್ಪಾದನೆ ಕಡಿಮೆಯಾಗಿದ್ದು, ಆವಕ ಇಲ್ಲದೆ ದರ ಏರಿಕೆಯತ್ತ ಹೆಜ್ಜೆ ಹಾಕಿದೆ. ತೊಗರಿ ಬೇಳೆ, ಉದ್ದಿನ ಬೇಳೆ ಒಮ್ಮೆಲೆ ತಲಾ ಕೆ.ಜಿ.ಗೆ ₹10ರಿಂದ ₹15 ಹೆಚ್ಚಳ ದಾಖಲಿಸಿದೆ. ಕಡಲೆಬೇಳೆ, ಕಡಲೆಕಾಳು, ಹೆಸರುಕಾಳು, ಅಲಸಂದೆ ಬೆಲೆ ಏರಿಕೆಯಾಗಿದೆ.
ಬ್ಯಾಡಗಿ ಗಗನಮುಖಿ: ಬ್ಯಾಡಗಿ ಮೆಣಸಿನಕಾಯಿ ಧಾರಣೆ ಆಕಾಶದತ್ತ ಮುಖ ಮಾಡಿದ್ದು, ಒಮ್ಮೆಲೆ ಕೆ.ಜಿ.ಗೆ ₹60–80 ಹೆಚ್ಚಳವಾಗಿದೆ. ಖಾರದ ಮೆಣಸಿನಕಾಯಿ ಸಹ ದುಬಾರಿಯಾಗಿದೆ. ಒಣಹಣ್ಣುಗಳ ದರವೂ ಏರಿಕೆ ಕಂಡಿದೆ.
ಧನ್ಯ ಕೆ.ಜಿ ₹120–140, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹440–480, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹210–220, ಕಾಳುಮೆಣಸು ಕೆ.ಜಿ ₹725–740, ಜೀರಿಗೆ ಕೆ.ಜಿ ₹270–280, ಚಕ್ಕೆ ಕೆ.ಜಿ ₹270–280, ಲವಂಗ ಕೆ.ಜಿ ₹780–820, ಗುಣಮಟ್ಟದ ಗಸಗಸೆ ಕೆ.ಜಿ ₹1,450–1,650, ಏಲಕ್ಕಿ ಕೆ.ಜಿ ₹3,000–3,100, ಬಾದಾಮಿ ಕೆ.ಜಿ ₹880–900, ಗೋಡಂಬಿ ಕೆ.ಜಿ ₹800–850, ಒಣದ್ರಾಕ್ಷಿ ಕೆ.ಜಿ ₹430–460ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ: ತೀವ್ರವಾಗಿ ಏರಿಕೆಯಾಗಿದ್ದ ಕೋಳಿ ಮಾಂಸದ ಧಾರಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹170, ರೆಡಿ ಚಿಕನ್ ಕೆ.ಜಿ ₹250, ಸ್ಕಿನ್‌ಲೆಸ್ ಕೆ.ಜಿ ₹275, ಫಾರಂ ಕೋಳಿ ಕೆ.ಜಿ ₹135ಕ್ಕೆ ಇಳಿಕೆಯಾಗಿದೆ. ಮೊಟ್ಟೆ ₹5.90ಕ್ಕೆ ಏರಿಕೆಯಾಗಿದೆ.
ಮೀನು ಏರಿಕೆ: ಮೀನಿನ ಬೆಲೆ ಮುಗಿಲಿನತ್ತ ಮುಖ ಮಾಡಿದೆ. ಬಂಗುಡೆ ಕೆ.ಜಿ ₹380, ಬೂತಾಯಿ ಕೆ.ಜಿ ₹380, ಬೊಳಿಂಜರ್ ₹370, ಅಂಜಲ್ ಕೆ.ಜಿ ₹960, ಬಿಳಿಮಾಂಜಿ ₹1,680, ಕಪ್ಪುಮಾಂಜಿ ₹910, ಇಂಡಿಯನ್ ಸಾಲ್ಮನ್ ₹1,060, ಸೀಗಡಿ ಕೆ.ಜಿ ₹510–850ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.