ADVERTISEMENT

ತುಮಕೂರು: ಬಯಲು ರಂಗಮಂದಿರ ಶಿಥಿಲಾವಸ್ಥೆಗೆ

2017ರಲ್ಲಿ ಮಂದಿರ ಉದ್ಘಾಟನೆ; ನಿರ್ವಹಣೆಗೆ ಅಧಿಕಾರಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:45 IST
Last Updated 27 ಆಗಸ್ಟ್ 2025, 5:45 IST
ತುಮಕೂರು ಬಾಲಭವನದ ಆವರಣದಲ್ಲಿರುವ ಬಯಲು ರಂಗಮಂದಿರ
ತುಮಕೂರು ಬಾಲಭವನದ ಆವರಣದಲ್ಲಿರುವ ಬಯಲು ರಂಗಮಂದಿರ   

ತುಮಕೂರು: ರಂಗಭೂಮಿ ಕಲಾವಿದರ ನಾಟಕ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಗರದ ಬಾಲಭವನದ ಆವರಣದಲ್ಲಿ ಪ್ರಾರಂಭಿಸಿದ್ದ ಬಯಲು ರಂಗಮಂದಿರ ಶಿಥಿಲಾವಸ್ಥೆಗೆ ತಲುಪಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿಯಿಂದ ರಂಗಮಂದಿರ ನಿರ್ಮಿಸಲಾಗಿತ್ತು. 2017ರಲ್ಲಿ ಉದ್ಘಾಟಿಸಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ, 8 ವರ್ಷಗಳಲ್ಲಿ ಬಳಕೆಗೆ ಬಾರದಷ್ಟು ಅಧ್ವಾನ ಆಗಿದೆ. ಮಂದಿರದ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿದ್ದು, ತೆರವುಗೊಳಿಸಿಲ್ಲ.

ವಿಶ್ವವಿದ್ಯಾಲಯದ ಆವರಣ ಮತ್ತು ಬಾಲಭವನದ ಬಳಿ ಮಾತ್ರ ಇಂತಹ ಬಯಲು ರಂಗ ಮಂದಿರಗಳಿವೆ. ಪ್ರಸ್ತುತ ಎರಡೂ ಬಳಕೆಗೆ ಸಿಗದಷ್ಟು ಹದಗೆಟ್ಟಿವೆ. ಈ ಹಿಂದೆ ಹಲವಾರು ನಾಟಕಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. ವಾರಾಂತ್ಯದಲ್ಲಿ ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು. ಈಗ ರಂಗ ಚಟುವಟಿಕೆಗಳು ಕಡಿಮೆಯಾಗಿದ್ದು, ರಂಗ ಮಂದಿರಗಳ ಬಳಕೆಯೂ ನಿಂತಿದೆ.

ADVERTISEMENT

ಬಾಲಭವನದ ಬಯಲು ರಂಗಮಂದಿರ ಸುಮಾರು 3 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದೆ. ಬಾಲಭವನ ಸಮಿತಿಗೆ ನಿರ್ವಹಣೆ ಹೊಣೆ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆಗೆ ಆದ್ಯತೆ ನೀಡಿಲ್ಲ. ಪಕ್ಕದಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಎಂ.ಜಿ.ರಸ್ತೆ, ಬಿಜಿಎಸ್‌ ವೃತ್ತ ಇದೆ. ನಗರದ ಪ್ರಮುಖ ಸ್ಥಳದಲ್ಲಿ ಇರುವ ರಂಗಮಂದಿರ ಉಳಿಸಿಕೊಳ್ಳುವಲ್ಲಿ ಅಧಿಕಾರಿ ವರ್ಗದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ನಾಲ್ಕು ಗೋಡೆಗೆ ಸೀಮಿತ: ಇತ್ತೀಚೆಗೆ ರಂಗ ಚಟುವಟಿಕೆಗಳು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿವೆ. ಈ ಹಿಂದಿನಂತೆ ಬೀದಿ ನಾಟಕ, ಬಯಲು ರಂಗಮಂದಿರದಲ್ಲಿ ನಾಟಕ ಪ್ರದರ್ಶನಗಳು ತೀರಾ ಕಡಿಮೆಯಾಗಿವೆ. ರಂಗಭೂಮಿ ಬಗ್ಗೆ ಜನರಲ್ಲಿ ಉತ್ಸಾಹ ಇಲ್ಲದಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಸರ್ಕಾರದಿಂದ ಕಲಾವಿದರಿಗೆ ಅಗತ್ಯ ಪ್ರೋತ್ಸಾಹ ದೊರೆಯುತ್ತಿಲ್ಲ. ಹೀಗಾಗಿ ರಂಗ ಚಟುವಟಿಕೆಗಳು ಸೊರಗಿವೆ.

‘ಕೆಲವರು ಸರ್ಕಾರಕ್ಕೆ ದಾಖಲೆ ಸಲ್ಲಿಸಲು ನಾಟಕ, ರಂಗ ಶಿಬಿರ ನಡೆಸುತ್ತಿದ್ದಾರೆ. ಇದರಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಸಾಕಷ್ಟು ಮಂದಿ ಕಲಾವಿದರು ಕೆಲಸ ಅರಸಿ ಊರೂರು ಅಲೆಯುತ್ತಿದ್ದಾರೆ. ರಂಗಭೂಮಿ ತವರು ಎಂದು ಕರೆಸಿಕೊಳ್ಳುವ ಜಿಲ್ಲೆಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ನಾಲ್ಕು ಗೋಡೆ ಮಧ್ಯೆ ನಡೆಯುವ ರಂಗ ಚಟುವಟಿಕೆಗಳು ಹೆಚ್ಚಿನ ಜನರನ್ನು ತಲುಪುತ್ತಿಲ್ಲ’ ಎಂದು ರಂಗಭೂಮಿಯ ಹಿರಿಯ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

ತುಮಕೂರು ಬಾಲಭವನದ ಆವರಣದಲ್ಲಿರುವ ರಂಗಮಂದಿರದ ಬಳಿ ಗಿಡಗಳು ಬೆಳೆದಿರುವುದು
ಬಯಲು ರಂಗ ಮಂದಿರಕ್ಕೆ ಕಾಯಕಲ್ಪ ನೀಡುವ ಬಗ್ಗೆ ಯೋಚಿಸಲಾಗಿದೆ. ಅನುದಾನ ಮೀಸಲಿಟ್ಟು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು
ಸಿದ್ದರಾಮಣ್ಣ ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪಾರ್ಕ್‌ ನಿರ್ವಹಣೆ ಮಾಡಿ:

ನಗರದ ವಿವಿಧೆಡೆ ಸ್ಮಾರ್ಟ್‌ ಸಿಟಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಯಿಂದ ಅಭಿವೃದ್ಧಿ ಪಡಿಸಿರುವ ಪಾರ್ಕ್‌ಗಳಲ್ಲಿ ಬಯಲು ರಂಗ ಮಂದಿರದ ಮಾದರಿಯಲ್ಲಿ ಬಯಲು ವೇದಿಕೆ ನಿರ್ಮಿಸಲಾಗಿದೆ. ಹಲವು ಕಡೆಗಳಲ್ಲಿ ನಿರ್ವಹಣೆ ಕೊರತೆಯಿಂದ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಉದ್ಯಾನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಆಸಕ್ತಿ ತೋರುತ್ತಿಲ್ಲ. ನಗರದಲ್ಲಿರುವ ರಂಗಭೂಮಿ ಕಲಾವಿದರಿಗೆ ಬಯಲು ವೇದಿಕೆಯ ಉಸ್ತುವಾರಿ ನೀಡಿದರೆ ಬಳಕೆ ಮಾಡಲು ಸುಲಭವಾಗುತ್ತದೆ. ಇಲ್ಲದಿದ್ದರೆ ಯಾರ ಬಳಕೆಗೂ ಬಾರದಂತೆ ಹಾಳಾಗುತ್ತವೆ ಎಂದು ಸ್ಥಳೀಯ ಕಲಾವಿದರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.