
ತುಮಕೂರು: ನಗರದ ಶಿರಾ ಗೇಟ್ ಬಳಿಯ 80 ಅಡಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ವಾಹನಗಳ ಸಂಚಾರ ದುಸ್ತರವಾಗಿದೆ. ರಸ್ತೆ ಅಭಿವೃದ್ಧಿಗಾಗಿ ₹12 ಕೋಟಿ ಮೀಸಲಿಟ್ಟು ನಾಲ್ಕು ವರ್ಷ ಕಳೆದರೂ ಭೂಮಿ ಪೂಜೆಗೆ ಮುಹೂರ್ತ ಕೂಡಿ ಬಂದಿಲ್ಲ.
ಒಂದೂವರೆ ಕಿಲೊ ಮೀಟರ್ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸವಾರರು ನಿತ್ಯ ಗೋಳಾಡುತ್ತಾ, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಾ ಮುಂದೆ ಸಾಗುತ್ತಿದ್ದಾರೆ. ಕನಿಷ್ಠ ಗುಂಡಿಗಳನ್ನು ಮುಚ್ಚುವ ಗೋಜಿಗೂ ಅಧಿಕಾರಿಗಳು ಮುಂದಾಗಿಲ್ಲ.
ನಾಲ್ಕು ಪಥದ ಮುಖ್ಯರಸ್ತೆ ಜತೆಗೆ ಸರ್ವೀಸ್ ರಸ್ತೆ, ಚರಂಡಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ₹12 ಕೋಟಿ ವ್ಯಯಿಸಲಾಗುತ್ತಿದೆ. ಟೆಂಡರ್ ಕರೆದಿದ್ದು, ಆದಷ್ಟು ಬೇಗ ಕೆಲಸ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮೂರು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಈವರೆಗೆ ರಸ್ತೆಗೆ ಕನಿಷ್ಠ ಡಾಂಬಾರು ಬಿದ್ದಿಲ್ಲ. ವಾಹನ ಸವಾರರು, ಇಲ್ಲಿನ ನಿವಾಸಿಗಳ ಪಡಿಪಾಟಲು ತಪ್ಪುತ್ತಿಲ್ಲ.
ಶಿರಾಗೇಟ್‌ನಿಂದ ದಿಬ್ಬೂರು ರಸ್ತೆಯ ವರೆಗಿನ ರಸ್ತೆ ಅಭಿವೃದ್ಧಿಗೆ ಈ ಹಿಂದೆ ₹35 ಲಕ್ಷಕ್ಕೆ ಯೋಜನೆ ಸಿದ್ಧ ಪಡಿಸಲಾಗಿತ್ತು. ಸಂಪೂರ್ಣವಾಗಿ ಹೊಸ ರಸ್ತೆ ನಿರ್ಮಿಸುವ ಉದ್ದೇಶದಿಂದ ಯೋಜನೆ ವೆಚ್ಚ ಹೆಚ್ಚಿಸಲಾಗಿದ್ದು, ಕೋಟಿಗಳಿಗೆ ಏರಿಕೆಯಾಗಿದೆ. ಕಾಮಗಾರಿ ಆರಂಭಕ್ಕೆ ದಿನ ನಿಗದಿ ಮಾಡುತ್ತಿಲ್ಲ. ಈ ತಿಂಗಳು, ಮುಂದಿನ ತಿಂಗಳು ಎಂದು ಸಮಯ ಮುಂದೂಡಲಾಗುತ್ತಿದೆ.
‘ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ರಸ್ತೆ ನಿರ್ಮಾಣ ಕೆಲಸ ಆರಂಭವಾಗಲಿದೆ’ ಎಂದು 2025ರ ಮಾರ್ಚ್‌ನಲ್ಲಿ ಮಹಾನಗರ ಪಾಲಿಕೆಯ ಅಂದಿನ ಆಯುಕ್ತೆ ಬಿ.ವಿ.ಅಶ್ವಿಜ ಹೇಳಿದ್ದರು. ಮುಂದಿನ ಒಂದೂವರೆ ತಿಂಗಳಲ್ಲಿ ಕಾಮಗಾರಿ ಶುರುವಾಗಲಿದೆ ಎಂದೂ ತಿಳಿಸಿದ್ದರು. ಕಾಮಗಾರಿ ಆರಂಭಿಸುವ ಉದ್ದೇಶದಿಂದ ಈ ರಸ್ತೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇಲ್ಲಿಯ ತನಕ ಯಾವುದೇ ಬೆಳವಣಿಗೆ ಕಂಡಿಲ್ಲ.
4 ವರ್ಷದಲ್ಲಿ ಮಹಾನಗರ ಪಾಲಿಕೆಗೆ ನಾಲ್ವರು ಆಯುಕ್ತರು ಬಂದು ಹೋಗಿದ್ದಾರೆ. ಇಬ್ಬರು ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಕೆಲಸ ಮಾತ್ರ ಆರಂಭವಾಗಿಲ್ಲ. ಜನರ ಬದುಕು ಸುಧಾರಿಸಿಲ್ಲ. ಇಲ್ಲಿಯೇ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕರ್ತವ್ಯ ನಿರ್ವಹಿಸಿ, ಈಗ ಜಿಲ್ಲಾಧಿಕಾರಿ ಆಗಿರುವ ಶುಭ ಕಲ್ಯಾಣ್ ಅವರಿಗೂ ಇದರ ಅರಿವಿದೆ. ಕಂಡರೂ ಕಾಣದಂತಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
‘ಜಿಲ್ಲಾಧಿಕಾರಿ ಪ್ರತಿ ದಿನ ಶಿರಾ ಗೇಟ್ ಮೂಲಕವೇ ಸಂಚರಿಸುತ್ತಾರೆ. ಇಲ್ಲಿಂದ ಕೂಗಳತೆಯ ದೂರದಲ್ಲಿಯೇ ಅವರ ನಿವಾಸ ಇದೆ. ಮುಖ್ಯರಸ್ತೆಯಲ್ಲಿ ಹೋಗುವಾಗ ಒಮ್ಮೆ ಕಣ್ಣಾಡಿಸಿದರೆ ಈ ಹದಗೆಟ್ಟ ರಸ್ತೆ ಕಾಣಿಸುತ್ತದೆ. ಜಿಲ್ಲಾಧಿಕಾರಿಗೆ ಅಷ್ಟು ಪುರುಸೊತ್ತು ಇಲ್ಲವೇ? ಜನರ ಕಷ್ಟ ಅವರಿಗೆ ಅರ್ಥ ಆಗುತ್ತಿಲ್ಲವೇ?’ ಎಂದು ಎಚ್‌ಎಂಎಸ್ ರಸ್ತೆಯ ನಿವಾಸಿ ಸಂದೇಶ್ ಕುಮಾರ್ ಪ್ರಶ್ನಿಸಿದರು.
ಸಂಪರ್ಕ ರಸ್ತೆ
ಈ ರಸ್ತೆ ಶಿರಾ ಗೇಟ್– ಗುಬ್ಬಿ ಗೇಟ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಭಾರಿ ವಾಹನಗಳು ಸರಕು ಸಾಗಣೆ ವಾಹನಗಳು ನಗರದಲ್ಲಿ ಸಂಚರಿಸುವುದನ್ನು ತಪ್ಪಿಸಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಶಿರಾ ಕೊರಟಗೆರೆ ಕಡೆಯಿಂದ ಬಂದು ಗುಬ್ಬಿ ಕುಣಿಗಲ್ ಕಡೆಗೆ ಸಾಗುವ ಹಾಗೂ ಗುಬ್ಬಿ ಕಡೆಯಿಂದ ಬಂದು ಶಿರಾ ಭಾಗಕ್ಕೆ ತೆರಳುವ ವಾಹನಗಳಿಗೆ ಈ ರಸ್ತೆ ಸಹಕಾರಿಯಾಗಲಿದೆ. ಬಜೆ ತೋಟದ ಬಳಿ ಸೇತುವೆ ನಿರ್ಮಿಸಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆದರೆ ಶಿರಾಗೇಟ್‌ನಿಂದ ದಿಬ್ಬೂರು ಮಾರ್ಗದ ರಸ್ತೆ ಹಾಳಾಗಿದ್ದು ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ.
ಪ್ರಾಣ ಹಿಂಡುವ ದೂಳು
ರಸ್ತೆಯ ದೂಳಿನಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಹತ್ತಾರು ವರ್ಷಗಳಿಂದ ರಸ್ತೆ ಇದೇ ಸ್ಥಿತಿಯಲ್ಲಿದೆ. ಹೊಸದಾಗಿ ಅಧಿಕಾರಿಗಳು ಬಂದಾಗ ಮಾತ್ರ ಇತ್ತ ನೋಡುತ್ತಾರೆ. ನಂತರ ಜನರ ಕಷ್ಟ ಏನೆಂದು ಕೇಳುವುದಿಲ್ಲ. ಕಣ್ಣು ಬಿಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಗತಿ ಇಲ್ಲದೆ ಇಲ್ಲಿ ಬದುಕುತ್ತಿದ್ದೇವೆ.
ಭೂತೇಶ್, ಫುಟ್‌ಪಾತ್ ವ್ಯಾಪಾರಿ
ವಾಹನ ಸಂಚಾರ ಕಷ್ಟ
ಒಂದು ಕಿ.ಮೀ ರಸ್ತೆ ಗುಂಡಿಗಳಿಂದ ತುಂಬಿದೆ. ವಾಹನ ಸಂಚಾರ ಸವಾಲಾಗಿದೆ. ಜೀವ ಬಿಗಿ ಹಿಡಿದುಕೊಂಡು ವಾಹನ ಓಡಿಸಬೇಕಿದೆ. ಎಚ್ಚರ ತಪ್ಪಿದರೆ ಗುಂಡಿಗೆ ಬಲಿ ಗ್ಯಾರಂಟಿ. ಸುಮಾರು ಜನ ಕೈ–ಕಾಲು ಮುರಿದುಕೊಂಡಿದ್ದಾರೆ. ನೋವುಂಡ ಜನರು ಅಧಿಕಾರಿ ವರ್ಗಕ್ಕೆ ಶಾಪ ಹಾಕುತ್ತಿದ್ದಾರೆ.
-ತಿಮ್ಮರಾಜು, ಶಿರಾ ಗೇಟ್ ನಿವಾಸಿ
ಯಾರನ್ನು ಕೇಳಬೇಕು?
ಮಹಾನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದು ಎರಡು ವರ್ಷ ಕಳೆದಿದೆ. ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು. ಶಾಸಕರು ಮಂತ್ರಿಗಳ ಹತ್ತಿರವೂ ಸುಳಿಯಲು ಆಗುವುದಿಲ್ಲ. ಅಧಿಕಾರಿಗಳು ಕಚೇರಿ ಬಿಟ್ಟಿ ಕದಲುವುದಿಲ್ಲ. ಇಲ್ಲವೆ ಕಚೇರಿಗೆ ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕು ದೂಡುತ್ತಿದ್ದೇವೆ. ಜನಪ್ರತಿನಿಧಿಗಳು ಕೇವಲ ನಾಮಕಾವಸ್ತೆ ಎಂಬಂತೆ ಇದ್ದಾರೆ. ಅವರಿಗೆ ಜನರ ಕಷ್ಟ ಬೇಕಿಲ್ಲ.
-ರೇಣುಕ ಪ್ರಸಾದ್ ನಿವಾಸಿ ಐಡಿಎಸ್‌ಎಂಟಿ ಬಡಾವಣೆ
ಯಾವಾಗ ಶುರು?
ಈ ತಿಂಗಳು ಕಾಮಗಾರಿ ಶುರುವಾಗುತ್ತದೆ ಅಂತ ವರ್ಷದ ಹಿಂದೆ ಹೇಳಿದರು. ಇದುವರೆಗೆ ಯಾರೊಬ್ಬರೂ ಈ ಕಡೆ ಬರಲಿಲ್ಲ. ರಸ್ತೆ ದೂಳಿನಿಂದ ಮುಕ್ತಿ ಕೊಡಿಸಿದರೆ ಸಾಕು ಎಂಬಂತಾಗಿದೆ. ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಇಲ್ಲಿಯೇ ವ್ಯಾಪಾರ ಮಾಡಿಕೊಂಡಿದ್ದೇವೆ. ಬೇರೆ ಕಡೆ ಹೋಗಲು ಆಗದೆ ಇಲ್ಲಿ ಬದುಕಲಾಗದೆ ಸಂಕಷ್ಟದಲ್ಲಿ ದಿನಗಳನ್ನು ತಳ್ಳುತ್ತಿದ್ದೇವೆ.
ಗಂಗರತ್ನ, ಫುಟ್‌ಪಾತ್ ವ್ಯಾಪಾರಿ 80 ಅಡಿ ರಸ್ತೆ
ವ್ಹೀಲಿಂಗ್ ಹೆಚ್ಚಳ
80 ಅಡಿ ರಸ್ತೆ ಎಚ್‌ಎಂಎಸ್ ರಸ್ತೆ ಶಿರಾಗೇಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮಧ್ಯರಾತ್ರಿಯಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. 80 ಅಡಿ ರಸ್ತೆ ಹಾಳಾದರೂ ಪುಂಡರು ವ್ಹೀಲಿಂಗ್ ಮಾಡುವುದನ್ನು ನಿಲ್ಲಿಸಿಲ್ಲ. ಹಲವು ಬಾರಿ ತಿಳಿ ಹೇಳಿದರೂ ಕೇಳುತ್ತಿಲ್ಲ. ಪೊಲೀಸ್ ಗಸ್ತು ಬರುತ್ತಿಲ್ಲ. ಬೈಕ್ ಸದ್ದಿನಿಂದ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ಕಿರಿಕಿರಿಯಾಗುತ್ತಿದೆ.
-ನಾಗರಾಜು ಎಚ್ಎಂಎಸ್ ರಸ್ತೆ ಶಿರಾ ಗೇಟ್