ತುಮಕೂರು: ಸಿದ್ಧಿ ವಿನಾಯಕ ಸೇವಾ ಮಂಡಳಿಯಿಂದ ನಗರದ ವಿನಾಯಕ ನಗರದ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಆ. 27ರಿಂದ ಸೆ. 24ರ ವರೆಗೆ 49ನೇ ವರ್ಷದ ಗಣೇಶೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
‘28 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ. ಪ್ರತಿ ಕಾರ್ಯಕ್ರಮ ಜನರಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆ, ಹೊರ ಜಿಲ್ಲೆ ಕಲಾವಿದರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ನಾದಸ್ವರ, ಭರತನಾಟ್ಯ, ನಾಟಕ, ಸುಗಮ ಸಂಗೀತ ಏರ್ಪಡಿಸಲಾಗಿದೆ’ ಎಂದು ಸಿದ್ಧಿ ವಿನಾಯಕ ಸೇವಾ ಮಂಡಳಿ ಉಪಾಧ್ಯಕ್ಷ ಟಿ.ಎಚ್.ಪ್ರಸನ್ನಕುಮಾರ್ ಇಲ್ಲಿ ಶುಕ್ರವಾರ ಮಾಹಿತಿ ನೀಡಿದರು.
‘ತಾರಕಾಸುರ ಸಂಹಾರ’ ವಿಶೇಷ ದೃಶ್ಯ ಅಲಂಕಾರ ಇರಲಿದೆ. ಪ್ರತಿ ದಿನ ಸಂಜೆ 6.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ. 14ರಂದು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಈ ವರ್ಷ ‘ಹಳೆಯ ಬೇರು-ಹೊಸ ಚಿಗುರು’ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, 75 ವರ್ಷದ ದಂಪತಿಯನ್ನು ಸನ್ಮಾನಿಸಲಾಗುತ್ತದೆ. ಸೆ. 24ರಂದು ಬೆಳಿಗ್ಗೆ 10 ಗಂಟೆಗೆ ವಿನಾಯಕ ಮೂರ್ತಿ ವಿಸರ್ಜನೆ ಮಹೋತ್ಸವ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡಳಿ ಅಧ್ಯಕ್ಷ ಎಚ್.ಆರ್.ನಾಗೇಶ್, ‘27ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಚಿವ ಜಿ.ಪರಮೇಶ್ವರ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಇತರರು ಭಾಗವಹಿಸಲಿದ್ದಾರೆ’ ಎಂದರು.
ಪದಾಧಿಕಾರಿಗಳಾದ ಟಿ.ಎಸ್.ಜಗಜ್ಯೋತಿ ಸಿದ್ದರಾಮಯ್ಯ, ಎ.ಆರ್.ಶ್ರೀನಾಥ್, ಟಿ.ಆರ್.ನಟರಾಜು, ಕೆ.ನರಸಿಂಹಮೂರ್ತಿ, ಕೆ.ಎಸ್.ರಾಘವೇಂದ್ರ, ಜಿ.ಸಿ.ವಿರೂಪಾಕ್ಷ, ಟಿ.ಆರ್.ಅನಸೂಯ ರುದ್ರಪ್ರಸಾದ್, ಇಂದ್ರಾಣಿ ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.