
ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಶಾರದಾದೇವಿ ನಗರದ ಉದ್ಯಮಿ ಟಿ.ಕೆ.ಜಯರತ್ನ ಎಂಬುವರು ₹28.64 ಲಕ್ಷ ಕಳೆದುಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಯ ಜಾಹೀರಾತು ಗಮನಿಸಿ, ಅದರಲ್ಲಿನ ಲಿಂಕ್ ಕ್ಲಿಕ್ ಮಾಡಿದ್ದಾರೆ. ‘Nuvama-277-Consalting Club’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಅವರ ನಂಬರ್ ಸೇರಿಸಲಾಗಿದೆ. ನಂತರ ಸದರಿ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದ ಲಿಂಕ್ ಕ್ಲಿಕ್ ಮಾಡಿ, ಅಗತ್ಯ ದಾಖಲೆ ಸಲ್ಲಿಸಿ ಖಾತೆ ತೆರೆದಿದ್ದಾರೆ.
ಇದಾದ ಬಳಿಕ ಹಣ ಹೂಡಿಕೆ ಮಾಡುವಂತೆ ಆರೋಪಿಗಳು ತಿಳಿಸಿದ್ದಾರೆ. ಅದರಂತೆ ಜಯರತ್ನ ಮೊದಲಿಗೆ ₹15 ಸಾವಿರ ವರ್ಗಾಯಿಸಿದ್ದಾರೆ. ಆರೋಪಿಗಳು ಮತ್ತಷ್ಟು ವರ್ಗಾವಣೆಗೆ ಪ್ರೇರೇಪಿಸಿದ್ದಾರೆ. ಹಂತ ಹಂತವಾಗಿ ಒಟ್ಟು ₹28.65 ಲಕ್ಷ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ಕೇವಲ ₹500 ವಾಪಸ್ ಬಂದಿದೆ.
ಮತ್ತಷ್ಟು ಹೂಡಿಕೆ ಮಾಡಿದರೆ ಪೂರ್ತಿ ಹಣ ವಾಪಸ್ ನೀಡಲಾಗುವುದು ಎಂದು ವಂಚಕರು ತಿಳಿಸಿದ್ದಾರೆ. ಮೋಸ ಹೋದ ವಿಷಯ ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.