
ತುಮಕೂರು: ಕೇಂದ್ರ ಹಣಕಾಸು ಸಚಿವ ಹಾಗೂ ಮುಖೇಶ್ ಅಂಬಾನಿ ಅವರ ‘ಎಐ ಕ್ವಾಂಟಮ್’ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ದಿನಕ್ಕೆ ₹50 ಸಾವಿರದಿಂದ ₹60 ಸಾವಿರ ಗಳಿಸಬಹುದು ಎಂದು ನಂಬಿಸಿ ಕುಣಿಗಲ್ ಪಟ್ಟಣದ ವಿದ್ಯಾನಗರ ಕೆಎಚ್‌ಬಿ ಕಾಲೊನಿ ಶಿಕ್ಷಕ ಕೆ.ಜಿ.ಕಾಳೇಗೌಡ ಎಂಬುವರಿಗೆ ₹7.71 ಲಕ್ಷ ವಂಚಿಸಲಾಗಿದೆ.
ಕಾಳೇಗೌಡ ಅವರು ಫೇಸ್‌ಬುಕ್‌ನಲ್ಲಿ ‘ಎಐ ಕ್ವಾಂಟಮ್’ಗೆ ಸಂಬಂಧಿಸಿದ ಜಾಹೀರಾತು ಕ್ಲಿಕ್ ಮಾಡಿದ್ದಾರೆ. ನಂತರ ಅವರಿಗೆ ವಾಟ್ಸ್ ಆ್ಯಪ್ ಕರೆ ಮಾಡಿದ ಆರೋಪಿಗಳು ಯೋಜನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಹೇಳಿದಂತೆ ಎಐ ಕ್ವಾಂಟಮ್‌ನಲ್ಲಿ ಚಿನ್ನ, ಕಚ್ಚಾ ತೈಲದಲ್ಲಿ ಹೂಡಿಕೆ ಮಾಡಿ, ದುಪ್ಪಟ್ಟು ಹಣ ಸಂಪಾದಿಸಬಹುದು ಎಂದು ನಂಬಿಸಿದ್ದಾರೆ. ಇದಾದ ಬಳಿಕ ವಂಚಕರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದ ಕಾಳೇಗೌಡ ಇ–ಕೆವೈಸಿ, ಬ್ಯಾಂಕ್ ಖಾತೆ ಸೇರಿ ಅಗತ್ಯ ದಾಖಲೆ ಸಲ್ಲಿಸಿ ನೋಂದಣಿಯಾಗಿದ್ದಾರೆ.
ಆರೋಪಿಗಳು ತಿಳಿಸಿದ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹7,71,907 ವರ್ಗಾವಣೆ ಮಾಡಿದ್ದಾರೆ. ಇದುವರೆಗೆ ಹೂಡಿಕೆ ಮಾಡಿದ ಹಣ ವಾಪಸ್ ನೀಡಲು ಇನ್ನೂ ₹6 ಲಕ್ಷ ವರ್ಗಾಯಿಸಬೇಕು ಎಂದಿದ್ದಾರೆ. ಇದರಿಂದ ಅನುಮಾನಗೊಂಡು ಸ್ನೇಹಿತರ ಬಳಿ ವಿಚಾರಿಸಿದಾಗ ವಂಚನೆ ವಿಷಯ ಗೊತ್ತಾಗಿದೆ.
ಹಣ ವಾಪಸ್ ಕೊಡಿಸಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.