ADVERTISEMENT

ತುಮಕೂರು ನಗರದಲ್ಲಿ ಟೆನಿಸ್ ಅಕಾಡೆಮಿ: ಸಚಿವ ಜಿ.ಪರಮೇಶ್ವರ

ಕರ್ನಾಟಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:46 IST
Last Updated 23 ಜನವರಿ 2026, 6:46 IST
<div class="paragraphs"><p>ತುಮಕೂರಿನಲ್ಲಿ ಗುರುವಾರ ರಾಜ್ಯಪಾಲ ತಾವರಚಂದ್ ಗೆಹಲೋತ್ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿದರು. ಸಚಿವ ಜಿ.ಪರಮೇಶ್ವರ, ಕೆ.ಗೋವಿಂದರಾಜ್ ಇತರರು ಉಪಸ್ಥಿತರಿದ್ದರು</p></div>

ತುಮಕೂರಿನಲ್ಲಿ ಗುರುವಾರ ರಾಜ್ಯಪಾಲ ತಾವರಚಂದ್ ಗೆಹಲೋತ್ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿದರು. ಸಚಿವ ಜಿ.ಪರಮೇಶ್ವರ, ಕೆ.ಗೋವಿಂದರಾಜ್ ಇತರರು ಉಪಸ್ಥಿತರಿದ್ದರು

   

ತುಮಕೂರು: ನಗರದಲ್ಲಿ ಟೆನಿಸ್ ಅಕಾಡೆಮಿ ಸ್ಥಾಪಿಸಲು ಪ್ರಯತ್ನ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ನಗರದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿತ್ತು.

ADVERTISEMENT

‘ನಗರದಲ್ಲಿ ಟೆನಿಸ್ ಅಕಾಡೆಮಿ ಸ್ಥಾಪಿಸುವಂತೆ ಟೆನಿಸ್ ಸಂಸ್ಥೆಯವರನ್ನು ಕೇಳಿಕೊಂಡಿದ್ದೇನೆ. 10 ಎಕರೆ ಜಾಗ ನೀಡಿದರೆ ಟೆನಿಸ್ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಆ ಪ್ರಯತ್ನ ನಡೆದಿದೆ’ ಎಂದರು.

ಹಾಕಿ ಕ್ರೀಡಾಂಗಣ, ಈಜುಕೊಳ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಇಷ್ಟು ಹಣ ಸಾಲದಾಗಿದ್ದು, ಮುಂದಿನ ಬಜೆಟ್‌ನಲ್ಲಿ ಇನ್ನೂ ಹೆಚ್ಚುವರಿಯಾಗಿ ₹2 ಕೋಟಿ ಒದಗಿಸುವಂತೆ ಮನವಿ ಮಾಡಲಾಗುವುದು. ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು 42 ಎಕರೆಯಲ್ಲಿ ₹160 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಚಾಲನೆ ನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಕ್ರಿಕೆಟ್ ಸಂಸ್ಥೆಯವರು ತಿಳಿಸಿರುವುದಾಗಿ ಹೇಳಿದರು.

ಈಗಾಗಲೇ ಸುಸಜ್ಜಿತ ಕ್ರೀಡಾಂಗಣ ನೀರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಾಕಿ ಕ್ರೀಡಾಂಗಣ, ಈಜುಕೊಳ, ಟೆನಿಸ್ ಕೋರ್ಟ್ ನಿರ್ಮಾಣವಾದರೆ ಕ್ರೀಡೆಗೆ ಬೇಕಾದ ಅಗತ್ಯ ಸೌಕರ್ಯ ಕಲ್ಪಿಸಿದಂತಾಗುತ್ತದೆ. ಶಿಕ್ಷಣ ಕೇಂದ್ರವಾಗಿರುವ ಜಿಲ್ಲೆ ಮುಂದೆ ಕ್ರೀಡಾ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ರಾಜ್ಯಪಾಲ ತಾವರಚಂದ್ ಗೆಹಲೋತ್, ‘ನಿರಂತರ ಅಭ್ಯಾಸದಿಂದ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಉನ್ನತ ಗುರಿಯೊಂದಿಗೆ ಮುನ್ನಡೆಯಬೇಕಿದೆ. ಕಠಿಣ ಪರಿಶ್ರಮಕ್ಕೆ ಪರ್ಯಾಯ ಮಾರ್ಗವಿಲ್ಲ. ಶಿಸ್ತು ಯಶಸ್ಸಿನ ಕೀಲಿಯಾಗಿದೆ’ ಎಂದು ಹೇಳುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.

ಕ್ರೀಡೆಯಲ್ಲಿ ಸೋಲು ವೈಫಲ್ಯವಲ್ಲ. ಅದು ಕಲಿಕೆಯ ಮೊದಲ ಮೆಟ್ಟಿಲು. ಸೋಲು ಅನುಭವ, ಆತ್ಮಾವಲೋಕವನ್ನು ಒದಗಿಸುತ್ತದೆ. ಜತೆಗೆ ಮುಂದಿನ ಗುರಿಗೆ ದಾರಿ ತೋರಿಸುತ್ತದೆ. ಕ್ರೀಡಾಪಟುಗಳ ಯಶಸ್ಸಿನ ಹಿಂದೆ ತರಬೇತುದಾರರ ಪರಿಶ್ರಮವಿದೆ. ತರಬೇತುದಾರರು ಯಶಸ್ಸಿನ ತಂತ್ರಗಳನ್ನು ಕಲಿಸುತ್ತಾರೆ. ಪರಿಶ್ರಮ, ತಾಳ್ಮೆ, ಮಾರ್ಗದರ್ಶನವು ಆಟಗಾರರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.

ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ‘ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿಯಲ್ಲಿ ಶೇ 25ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಪರೀಕ್ಷೆಯಲ್ಲಿ ಶೇ 5ರಷ್ಟು ಕೃಪಾಂಕ ನೀಡುವ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

ಕನ್ನಿಕಾ ಪರಮೇಶ್ವರ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಮಹೇಶ್, ಕರ್ನಾಟಕ ಒಲಿಂಪಿಕ್ ಸಂಸ್ಥೆ ಕಾರ್ಯದರ್ಶಿ ಟಿ.ಅನಂತರಾಜು, ಜಂಟಿ ಕಾರ್ಯದರ್ಶಿ ಪ್ರಕಾಶ್, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಆರ್.ಚೇತನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇತರರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು
ಸಮಾರೋಪ ಸಮಾರಂಭದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.