ADVERTISEMENT

ತುಮಕೂರು: ಒಂದೇ ದಿನ 9 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 22 ಮೇ 2020, 8:24 IST
Last Updated 22 ಮೇ 2020, 8:24 IST
   

ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 9 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

9 ಜನರಲ್ಲಿ 6 ಜನರು ಮುಂಬೈ ಪ್ರಯಾಣ ಮಾಡಿದವರಾಗಿದ್ದಾರೆ. ಮುಂಬೈನಿಂದ ಬರುತ್ತಿದ್ದಂತೆ ಇವರನ್ನು ತುಮಕೂರು ಹಾಗೂ ತುರುವೇಕೆರೆ ತಾಲ್ಲೂಕು ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ತುಮಕೂರು ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.

ಉಳಿದಂತೆ ಮೂರು ಜನರ ಪೈಕಿ ಒಬ್ಬರು ತುಮಕೂರು ಗ್ರಾಮಾಂತರ ಹೆಬ್ಬೂರಿನ 66 ವರ್ಷದ ವ್ಯಕ್ತಿ ಡಯಾಬಿಟಿಸ್ ಹಾಗೂ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ದೃಢಪಟ್ಟಿದೆ.

ADVERTISEMENT

ಇನ್ನೊಬ್ಬರು ತುಮಕೂರು ಸದಾಶಿವನಗರದ 24 ವರ್ಷದ ಗರ್ಭಿಣಿಗೆ ಸೋಂಕು ತಗಲಿದ್ದು, ಗಂಭೀರ ಪ್ರಕರಣವಾದ್ದರಿಂದ ಇವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಗುರುವಾರ(ನಿನ್ನೆ) ರಾತ್ರಿ ಹೆರಿಗೆಯಾಗಿದೆ. ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಬ್ಬರು ಬೆಂಗಳೂರು ಗ್ರಾಮಾಂತರ ಡಾಬಸ್‌ಪೇಟೆಯ 55 ವರ್ಷದ ಮಹಿಳೆ ಚಿಕಿತ್ಸೆಗೆಂದು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೂ ಸೋಂಕು ತಗಲಿರುವುದು ದೃಢಪಟ್ಟಿದೆ.

ಸೋಂಕು ತಡೆಗಟ್ಟುವ ಸಲುವಾಗಿ ತುಮಕೂರು ನಗರದ ಸದಾಶಿವನಗರ ಹಾಗೂ ತುಮಕೂರು ಗ್ರಾಮಾಂತರ ಹೆಬ್ಬೂರಿನಲ್ಲಿ ನಿರ್ಬಂಧಿತ ವಲಯ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.