
ತುಮಕೂರು: ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಐದು ವರ್ಷದಲ್ಲಿ 95 ಸಾವಿರ ಮಂದಿ ರಕ್ತದಾನ ಮಾಡಿದ್ದಾರೆ. ರಕ್ತ ಸಂಗ್ರಹ ಕಾರ್ಯದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಜತೆಗೆ ಖಾಸಗಿ ಕೇಂದ್ರಗಳು ಕೈಜೋಡಿಸುತ್ತಿವೆ.
ಸರ್ಕಾರದ ಒಂದು ಕೇಂದ್ರ, 8 ಖಾಸಗಿ ರಕ್ತನಿಧಿ ಕೇಂದ್ರಗಳು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿವೆ. 2021–22ರಿಂದ 2025ರ ಅಂತ್ಯಕ್ಕೆ ಖಾಸಗಿ ಕೇಂದ್ರಗಳಲ್ಲಿ 65,628 ಯುನಿಟ್, ಜಿಲ್ಲಾ ಆಸ್ಪತ್ರೆಯ ಕೇಂದ್ರದಲ್ಲಿ 29,574 ಯುನಿಟ್ ಸೇರಿ ಒಟ್ಟು 95,202 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗುತ್ತಿದ್ದಾರೆ.
ಖಾಸಗಿ ಕೇಂದ್ರಗಳಿಂದ ಕಳೆದ ಐದು ವರ್ಷದಲ್ಲಿ 393 ರಕ್ತದಾನ ಶಿಬಿರ ಆಯೋಜಿಸಲಾಗಿದೆ. ತುರ್ತು ಸಮಯಕ್ಕೆ ರಕ್ತ ಪೂರೈಸಲಾಗುತ್ತಿದೆ. ಸರ್ಕಾರಿ ಕೇಂದ್ರವೂ ಸಕ್ರಿಯವಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಉಳಿದ ಎಲ್ಲ ಕೇಂದ್ರಗಳ ಪೈಕಿ ಜಿಲ್ಲಾ ಆಸ್ಪತ್ರೆಯ ಕೇಂದ್ರವು ರಕ್ತ ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ವೈದ್ಯರು, ಸಿಬ್ಬಂದಿ ರೋಗಿಗಳಿಗೆ ರಕ್ತದ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯ ವಿವಿಧೆಡೆ ನಡೆಯುವ ಶಿಬಿರಕ್ಕೆ ತೆರಳಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಚಾಲಕರು, ಅಟೆಂಡರ್, ಒಬ್ಬರು ವೈದ್ಯರು, ಸಮಾಲೋಚಕರು, ಇಬ್ಬರು ಶುಶ್ರೂಷಕರು ಶಿಬಿರದಲ್ಲಿ ಕೆಲಸ ನಿರ್ವಹಿಸುತ್ತಾರೆ.
ಕೇಂದ್ರದ ಒಳಗೆ ವೈದ್ಯ, ಸಮಾಲೋಚಕರು, ನರ್ಸ್ ಇರಲಿದ್ದಾರೆ. ಆಸ್ಪತ್ರೆಯ ಡೇ–ಕೇರ್‌ನಲ್ಲಿ ದಾಖಲಾದ ನವಜಾತ ಶಿಶುಗಳಿಗೆ ಸಕಾಲಕ್ಕೆ ರಕ್ತ ಪರೀಕ್ಷೆ, ಅಗತ್ಯ ಸಮಯದಲ್ಲಿ ರಕ್ತ ಪೂರೈಕೆಗೆ ಇಬ್ಬರು ನರ್ಸ್ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ನಾಲ್ವರು ತಂತ್ರಜ್ಞರನ್ನು ಸಹ ನೇಮಿಸಲಾಗಿದೆ.
ಸಿಬ್ಬಂದಿ ಕೊರತೆ: ಜಿಲ್ಲಾ ಆಸ್ಪತ್ರೆಗೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ನೂರಾರು ಯುನಿಟ್ ರಕ್ತ ಸರಬರಾಜು ಮಾಡಲಾಗುತ್ತಿದೆ. ದೊಡ್ಡಾಸ್ಪತ್ರೆಗೆ ರಕ್ತನಿಧಿ ಕೇಂದ್ರದಲ್ಲಿ ಸಿಬ್ಬಂದಿ ಸಾಲದಾಗಿದ್ದು, ಈಗ ಇರುವವರು ಕೆಲಸದ ಒತ್ತಡ ಎದುರಿಸುತ್ತಿದ್ದಾರೆ. ತುರ್ತು ತೀವ್ರ ನಿಗಾ ಘಟಕ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಶುರುವಾದರೆ ರಕ್ತ ಪೂರೈಕೆಗೆ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆಗೆ ತಕ್ಕಂತೆ ಸಿಬ್ಬಂದಿ ನಿಯೋಜಿಸುವ ಕಡೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.