ADVERTISEMENT

ಹಾಲು ಉತ್ಪಾದನೆ: ತುಮಲ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 6:47 IST
Last Updated 16 ಅಕ್ಟೋಬರ್ 2025, 6:47 IST
<div class="paragraphs"><p>ಹುಳಿಯಾರು ಸಮೀಪದ ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಬಿಎಂಸಿ ಘಟಕವನ್ನು ತುಮಲ್‌ ಅಧ್ಯಕ್ಷ ಎಚ್.ವಿ.ವೆಂಕಟೇಶ್‌ ಉದ್ಘಾಟಿಸಿದರು</p></div>

ಹುಳಿಯಾರು ಸಮೀಪದ ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಬಿಎಂಸಿ ಘಟಕವನ್ನು ತುಮಲ್‌ ಅಧ್ಯಕ್ಷ ಎಚ್.ವಿ.ವೆಂಕಟೇಶ್‌ ಉದ್ಘಾಟಿಸಿದರು

   

ಹುಳಿಯಾರು: ಹಾಲು ಉತ್ಪಾದನೆಯಲ್ಲಿ ತುಮಕೂರು ಹಾಲು ಒಕ್ಕೂಟ ಪ್ರಥಮ ಸ್ಥಾನದಲ್ಲಿದ್ದು, ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ತುಮುಲ್‌ ಅಧ್ಯಕ್ಷ ಎಚ್.ವಿ.ವೆಂಕಟೇಶ್‌ ತಿಳಿಸಿದರು.

ಬೊಮ್ಮೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಹಾಲು ಉತ್ಪಾದನೆ ಈ ಹಿಂದೆ ಹೆಚ್ಚಳವಾದಾಗ ತುಮುಲ್‌ ವಾರದಲ್ಲಿ ಎರಡು ದಿನ ಹಾಲು ಖರೀದಿ ಮಾಡಲಾಗದೆ ಹೈನುಗಾರರಿಗೆ ನಷ್ಟವಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಹಾಲಿನ ಸಿಹಿ ಉತ್ಪನ್ನಗಳ ತಯಾರಿಕೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದ್ದು, ಎಷ್ಟು ಉತ್ಪಾದನೆ ಆದರೂ ಖರೀದಿ ನಿಲ್ಲುವುದಿಲ್ಲ. ಚಿಕ್ಕನಾಯಕನಹಳ್ಳಿ ಹಾಗೂ ಪಾವಗಡ ಬರದ ತಾಲ್ಲೂಕುಗಳಾಗಿದ್ದು ನೀರಿನ ಲಭ್ಯತೆ ಕಡಿಮೆಯಿದೆ. ಆದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ತುಮಕೂರು ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪಾವಗಡ ತಾಲ್ಲೂಕಿನಲ್ಲಿ ಉತ್ಪಾದನೆ ಕಡಿಮೆಯಿದ್ದು, ಈಗಾಗಲೇ ಜಿಲ್ಲಾ ಸಹಕಾರ ಬ್ಯಾಂಕ್‌ ನೆರವು ಪಡೆದು ಹಸುಗಳನ್ನು ಕೊಳ್ಳಲು ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾವಗಡದಲ್ಲೂ ಹೆಚ್ಚು ಹಾಲು ಉತ್ಪಾದನೆಗೆ ಶ್ರಮ ವಹಿಸಲಾಗುವುದು ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಬುಳ್ಳೇನಹಳ್ಳಿ ಶಿವಪ್ರಕಾಶ್‌ ಮಾತನಾಡಿ, ಬಿಎಂಸಿ ಘಟಕಗಳ ಸ್ಥಾಪನೆಯಿಂದ ಹಾಲು ಶೇಖರಣೆಗೆ ಅನುಕೂಲವಾಗಿದೆ. ಎಲ್ಲಾ ಹಾಲನ್ನು ಒಂದೇ ಬಾರಿ ಒಕ್ಕೂಟಕ್ಕೆ ಸಾಗಿಸಲು ಕಷ್ಟಸಾಧ್ಯ. ಘಟಕಗಳಲ್ಲಿ ಶೇಖರಣೆ ಮಾಡಿ ನಂತರ ಸಾಗಾಣೆ ಮಾಡಲಾಗುತ್ತಿದ್ದು ಇದರಿಂದ ಸಾಗಣೆ ವೆಚ್ಚವೂ ಕಡಿಮೆಯಾಗುತ್ತಿದೆ ಎಂದರು.

ತುಮಕೂರು ಹಾಲು ಒಕ್ಕೂಟದ ತಿಪಟೂರು ತಾಲ್ಲೂಕು ನಿರ್ದೇಶಕ ಎಂ.ಕೆ.ಪ್ರಕಾಶ್‌, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸನ್‌, ಮುಖಂಡರಾದ ವೈ.ಜಿ.ಸಿದ್ದರಾಮಯ್ಯ, ಕಲ್ಲೇಶ್‌, ನಂದಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಂದಿಹಳ್ಳಿ ಶಿವಣ್ಣ, ಬೊಮ್ಮೇನಹಳ್ಳಿ ಸಂಘದ ಅಧ್ಯಕ್ಷ ಬಿ.ಆರ್.ಪರಮೇಶ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮಚಂದ್ರ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಮೋಹನ್‌ಕುಮಾರ್‌, ಸಿದ್ದಲಿಂಗಸ್ವಾಮಿ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.