ADVERTISEMENT

ದಸರಾಗೆ ‘ನಾರಿಯರ’ ಶಕ್ತಿ

ಸಿರಿ ಧಾನ್ಯಗಳಲ್ಲಿ ಅರಳಿದ ರಂಗೋಲಿ; 175 ಮಹಿಳೆಯರು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:20 IST
Last Updated 28 ಸೆಪ್ಟೆಂಬರ್ 2025, 6:20 IST
ತುಮಕೂರಿನಲ್ಲಿ ಶನಿವಾರ ರಂಗೋಲಿ ಬಿಡಿಸಿದ ಮಹಿಳೆಯರು
ತುಮಕೂರಿನಲ್ಲಿ ಶನಿವಾರ ರಂಗೋಲಿ ಬಿಡಿಸಿದ ಮಹಿಳೆಯರು   

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆರಂಭವಾಗಿರುವ ‘ತುಮಕೂರು ದಸರಾ’ಗೆ ಮಹಿಳೆಯರು ಮೆರುಗು ತಂದರು. ಶನಿವಾರ ನಡೆದ ವಿವಿಧ ಸ್ಪರ್ಧೆಗಳಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ರಾಧಾಕೃಷ್ಣನ್‌ ರಸ್ತೆಯ ಒಂದು ಬದಿ, ಉಪ್ಪಾರಹಳ್ಳಿ ರಸ್ತೆ ಕೆಳ ಸೇತುವೆ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿತ್ತು. ಬಿ.ಎಚ್‌.ರಸ್ತೆಯಿಂದ ಉಪ್ಪಾರಹಳ್ಳಿ ಕೆಳ ಸೇತುವೆ ತನಕ ವಿವಿಧ ಬಣ್ಣದ ಚಿತ್ರಗಳು ಮೂಡಿ ಬಂದವು. ಪಾವಗಡ, ಗುಬ್ಬಿ, ತಿಪಟೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ 175ಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದರು. ವಿವಿಧ ಬಣ್ಣಗಳಲ್ಲಿ ಹಲವು ಬಗೆಯ ಚಿತ್ರಗಳು ಅರಳಿದವು. ಮಹಿಳೆಯೊಬ್ಬರು ಸಿರಿ ಧಾನ್ಯ ಬಳಸಿ ಬಿಡಿಸಿದ ರಂಗೋಲಿ ಚಿತ್ರ ವೀಕ್ಷಕರ ಮೆಚ್ಚುಗೆ ಪಡೆಯಿತು.

ಕೆಸ್ತೂರಿನ ಮಹಿಳೆ ತರಕಾರಿಯಲ್ಲಿ ಚಿತ್ರ ತಯಾರಿಸಿದ್ದು, ನೋಡುಗರ ಗಮನ ಸೆಳೆಯಿತು. ‘ತರಕಾರಿಯಲ್ಲಿ ರಂಗೋಲಿ ಬಿಡಿಸಬೇಕು ಎಂಬ ಆಲೋಚನೆ ಹೇಗೆ ಬಂತು?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರಶ್ನಿಸಿದರು. ‘ಮನೆಯಲ್ಲಿ ಪ್ರತಿ ದಿನ ಅಡುಗೆಗೆ ಬಳಸುವ ತರಕಾರಿಯಿಂದಲೇ ವಿಶೇಷವಾಗಿ ಮಾಡಬೇಕು ಎಂದು ಈ ರೀತಿ ರಂಗೋಲಿ ಬಿಡಿಸಿದೆ’ ಎಂದು ಮಹಿಳೆ ಪ್ರತಿಕ್ರಿಯಿಸಿದರು.

ADVERTISEMENT

ಮಹಿಳೆಯರು ತಮ್ಮಲ್ಲಿನ ಪ್ರತಿಭೆ ಒರೆಗೆ ಹಚ್ಚಿದರು. ಬೆಳಿಗ್ಗೆ 7 ಗಂಟೆಯಿಂದಲೇ ಚಿತ್ರ ಬಿಡಿಸುವುದರಲ್ಲಿ ನಿರತರಾಗಿದ್ದರು. ಜೂನಿಯರ್‌ ಕಾಲೇಜು ಮೈದಾನದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಗೆ ನಾಮುಂದು ತಾಮುಂದು ಎಂಬಂತೆ ಮಹಿಳೆಯರು ಮುಗಿ ಬಿದ್ದರು. ತಾಲ್ಲೂಕು ಮಟ್ಟದ ತಂಡಗಳನ್ನು ರಚಿಸಿ ಸ್ಪರ್ಧೆಗೆ ಅಣಿಗೊಳಿಸಲಾಯಿತು.

ಮ್ಯೂಸಿಕಲ್‌ ಚೇರ್‌ ಸ್ಪರ್ಧೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶನಿವಾರ ಸರ್ಕಾರಿ ರಜೆ ಇದ್ದ ಪರಿಣಾಮ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ದಸರಾ ಆಚರಣೆಗೆ ಕೈಜೋಡಿಸಿದರು.

ಕಾಲಿಗೆ ಬಟ್ಟೆ ಕಟ್ಟಿಕೊಂಡು ಓಡುವ ಸ್ಪರ್ಧೆ ಗಮನ ಸೆಳೆಯಿತು

ದಸರಾದಲ್ಲಿ ಇಂದು

ಚಾಮುಂಡೇಶ್ವರಿ ದೇವಿಗೆ ಕಾತ್ಯಾಯಿನಿ ಅಲಂಕಾರ. ಸ್ಥಳ: ಜೂನಿಯರ್‌ ಕಾಲೇಜು ಮೈದಾನ. ಬೆಳಿಗ್ಗೆ 9. ಮ್ಯಾರಥಾನ್‌ ಓಟ ಬೆಳಿಗ್ಗೆ 7. ನಾಡಕುಸ್ತಿ ಸ್ಪರ್ಧೆ ಬೆಳಿಗ್ಗೆ 9.30. ದಸರಾ ಕವಿಗೋಷ್ಠಿ. ಬೆಳಿಗ್ಗೆ 10. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿಬ್ಬೂರು ಮಂಜು ಮತ್ತು ತಂಡದಿಂದ ಸುಗಮ ಸಂಗೀತ ತುರುವೇಕೆರೆ ಪಿಎಂಶ್ರೀ ಸರ್ಕಾರಿ ಮಾದರಿ ಶಾಲೆ ಮಕ್ಕಳಿಂದ ನಂದಿಧ್ವಜ ಕುಣಿತ ಸರ್ವೋದಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕನಸು ಡ್ಯಾನ್ಸ್‌ ಅಕಾಡೆಮಿಯಿಂದ ಸಮೂಹ ನೃತ್ಯ ಅನಘ ತಂಡದಿಂದ ನೃತ್ಯ ರೂಪಕ ಸಿದ್ಧಾರ್ಥ ನರ್ಸಿಂಗ್‌ ಶಾಲೆ ವಿದ್ಯಾರ್ಥಿಗಳಿಂದ ಮಹಾಭಾರತ ನೃತ್ಯ ರೂಪಕ ಗೀತಾ ಭತ್ತದ್‌ ತಂಡದಿಂದ ಶಾಸ್ತ್ರೀಯ ಸಂಗೀತ ಕಂಚಿರಾಯಸ್ವಾಮಿ ಯಕ್ಷಗಾನ ಸಂಘದಿಂದ ಮೂಡಲಪಾಯ ಯಕ್ಷಗಾನ. ಸಂಜೆ 4 ಜಿಮ್ನಾಸ್ಟಿಕ್‌ ಸ್ಪರ್ಧೆ. ಸ್ಥಳ– ಜಿಮ್ನಾಸ್ಟಿಕ್‌ ಸಂಕೀರ್ಣ ಕುವೆಂಪು ನಗರ. ಬೆಳಿಗ್ಗೆ 9.30. ಪಂಜಿನ ಕವಾಯತು. ಸ್ಥಳ– ಜಿಲ್ಲಾ ಕ್ರೀಡಾಂಗಣ. ಸಂಜೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.