ADVERTISEMENT

ತುಮಕೂರು: ಜಾರಕಿಹೊಳಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 6:11 IST
Last Updated 30 ಮಾರ್ಚ್ 2021, 6:11 IST
ಆರ್. ರಾಮಕೃಷ್ಣ
ಆರ್. ರಾಮಕೃಷ್ಣ   

ತುಮಕೂರು: ‘ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ರಾಮಕೃಷ್ಣ ಇಲ್ಲಿ ಸೋಮವಾರ
ಆಗ್ರಹಿಸಿದರು.

‘ರಮೇಶ್ ಸಿ.ಡಿ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಗಂಡಸು, ಗಾಂಡು ಎಂಬ ಪದಗಳನ್ನು ಬಳಕೆ ಮಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಈಗಾಗಲೇ ಪ್ರಕರಣದಲ್ಲಿ ಹೆಸರಿಸಲಾದ ಯುವತಿ ನನಗೆ ಎಸ್‌ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ನ್ಯಾಯಾಧೀಶರಿಗೂ ಪತ್ರ ಬರೆದಿದ್ದಾರೆ. ಅಲ್ಲದೆ ಎಸ್‌ಐಟಿ ಪಕ್ಷಪಾತದಿಂದ ನಡೆದುಕೊಳ್ಳುತ್ತಿದೆ ಎಂಬ ಯುವತಿಯ ಹೇಳಿಕೆಗೆ ಹಲವು ವಕೀಲರು ಧ್ವನಿಗೂಡಿಸಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ‘ಸಿ.ಡಿ ವಿಚಾರದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ನೈತಿಕತೆಯ ಪ್ರಶ್ನೆ ಮೂಡುತ್ತದೆ. ಸಂಸ್ಕೃತಿ, ದೇಶ ಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ತಪ್ಪು. ಈಗಾಗಲೇ ಯುವತಿ ತನ್ನ ವಕೀಲರ ಮೂಲಕ ದೂರು ನೀಡಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು. ಅದು ಬಿಟ್ಟು ಆರೋಪಿ ರಮೇಶ್ ಜಾರಕಿಹೊಳಿ ಪರವಾಗಿಯೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಎಸ್‌ಐಟಿ ತಂಡ ಆರೋಪಿ ಪರವಾಗಿ ನಿಂತಿದೆ’ ಎಂದು ದೂರಿದರು.

ಪಕ್ಷದ ಮುಖಂಡರಾದ ಆರ್. ನಾರಾಯಣ, ನರಸೀಯಪ್ಪ, ಎಚ್.ಸಿ. ಹನುಮಂತಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೊ ರಾಜು, ಮೆಹಬೂಬ್ ಪಾಷಾಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.