ADVERTISEMENT

ತುಮಕೂರು: ಜಿಲ್ಲಾ ಮಟ್ಟದ ಸಿರಿಧಾನ್ಯ ಖಾದ್ಯ ಪಾಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 4:28 IST
Last Updated 1 ಜನವರಿ 2026, 4:28 IST
ತುಮಕೂರಿನಲ್ಲಿ ಬುಧವಾರ ಆಯೋಜಿಸಿದ್ದ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು
ತುಮಕೂರಿನಲ್ಲಿ ಬುಧವಾರ ಆಯೋಜಿಸಿದ್ದ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು   

ತುಮಕೂರು: ನಗರದ ಆರ್.ಟಿ.ನಗರದ ರವೀಂದ್ರ ಕಲಾನಿಕೇತನದ ಆವರಣದಲ್ಲಿ ಬುಧವಾರ ಸಿರಿಧಾನ್ಯ ಖಾದ್ಯಗಳ ಘಮಲು ಹರಡಿತ್ತು. ರಾಗಿಯಲ್ಲಿ ತಯಾರಿಸಿದ ಕೇಕ್‌, ಸಿರಿ ಧಾನ್ಯದ ಇಡ್ಲಿ, ನವಣೆ ಚಿತ್ರಾನ್ನ, ಬಾಯಲ್ಲಿ ನೀರೂರಿಸುವ ಹಲಸಿನ ಕಬಾಬ್‌, ರಾಗಿ ಹಲ್ವಾ ಇತರೆ ತರಹೇವಾರಿ ಖಾದ್ಯ ಪ್ರದರ್ಶಿಸಲಾಯಿತು.

ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ 106 ಜನ ಸ್ಪರ್ಧೆಗೆ ನೋಂದಣಿ ಮಾಡಿಕೊಂಡಿದ್ದರು. 40 ಸಿಹಿ ಖಾದ್ಯ, 42 ಖಾರದ ಖಾದ್ಯ, 30ಕ್ಕೂ ಹೆಚ್ಚು ಮರೆತು ಹೋದ ಖಾದ್ಯ ಪ್ರದರ್ಶಿಸಿದರು.

ನವಣೆ, ಸಜ್ಜೆ ಜೋಳ, ಕೊರಲೆ, ಶೇಂಗಾ ಬಳಸಿ ತಯಾರಿಸಿದ ರೊಟ್ಟಿ, ರಾಗಿ ಉಪ್ಪಿಟ್ಟು, ನವಣೆ ಪುಲಾವ್‌, ಸಜ್ಜೆ ಲಾಡು, ಅಗಸೆ ಲಡ್ಡು, ಅವರೆ ಕಾಳು ತಂಬಿಟ್ಟು, ಅಗಸೆ ಮಜ್ಜಿಗೆ, ಮೆಂತೆ ಕಡುಬು ಇತರೆ ಖಾದ್ಯಗಳ ರುಚಿ ಪರಿಚಯಿಸಲಾಯಿತು. ಸ್ಪರ್ಧಿಗಳು ಸಿರಿಧಾನ್ಯ ಬಳಕೆಯ ಕುರಿತು ಅರಿವು ಮೂಡಿಸಿದರು. ಆರೋಗ್ಯ ರಕ್ಷಣೆ ಕ್ರಮಗಳ ಬಗ್ಗೆ ಸಲಹೆ ಮಾಡಿದರು.

ADVERTISEMENT

ಮಧುಗಿರಿಯ 78 ವರ್ಷದ ಕಾಮಕ್ಕ ಹುಣಸೆ ತೊಕ್ಕು ತಯಾರಿಸಿ ಸ್ಪರ್ಧೆಗೆ ತಂದಿದ್ದರು. ಸ್ಥಳದಲ್ಲಿ ಇದ್ದವರಿಗೆ ತೊಕ್ಕು ತಯಾರಿಯ ಕುರಿತು ಮಾಹಿತಿ ಹಂಚಿಕೊಂಡರು. ಯುವತಿಯರು, ಮಹಿಳೆಯರು ಅವರ ಮಾತು ಆಲಿಸಿದರು. ಬಾಲ್ಯದಿಂದ ಅನುಸರಿಸಿಕೊಂಡು ಬರುತ್ತಿರುವ ಸಿರಿ ಧಾನ್ಯ ಆಹಾರ ಪದ್ಧತಿ, ಆರೋಗ್ಯ ರಕ್ಷಣೆಯ ಗುಟ್ಟು ಬಿಚ್ಚಿಟ್ಟರು.

ತಿಪಟೂರು ತಾಲ್ಲೂಕಿನ ಮಾದಿಹಳ್ಳಿ ಕಾವ್ಯಾ ಅವರು ಕೇವಲ ರಾಗಿಯಲ್ಲಿ ತಯಾರಿಸಿದ ಕೇಕ್‌ ಗಮನ ಸೆಳೆಯಿತು. ಸಕ್ಕರೆ, ಮೈದಾ ಬಳಸದೆ ಕೇಕ್‌ ಸಿದ್ಧ ಪಡಿಸಿದ್ದರು. ‘ಹಲವು ವರ್ಷಗಳಿಂದ ಮನೆಯಲ್ಲಿ ಕೇಕ್‌ ಮಾಡುತ್ತಿದ್ದೇನೆ. ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಸಿರಿ ಧಾನ್ಯಗಳಿಂದ ಆರೋಗ್ಯ ರಕ್ಷಣೆ ಸಾಧ್ಯ’ ಎಂದು ಪ್ರತಿಕ್ರಿಯಿಸಿದರು.

ಸ್ಪರ್ಧೆಯ ವಿಜೇತರು ಕ್ರಮವಾಗಿ

ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು. ಮರೆತು ಹೋದ ಖಾದ್ಯಗಳ ವಿಭಾಗ– ಎಸ್‌.ಅನಿತಾ (ತುಮಕೂರು) ರಾಧಾ (ಚಿಕ್ಕನಾಯಕನಹಳ್ಳಿ) ರೂಪಾ (ತುಮಕೂರು). ಸಿರಿಧಾನ್ಯ ಖಾರ– ಕೆ.ಎಸ್‌.ಪುಷ್ಪಲತಾ (ತುಮಕೂರು) ವನಿತಾ ಭಟ್‌ (ಗುಬ್ಬಿ) ಕವಿತಾ (ತಿಪಟೂರು). ಸಿರಿಧಾನ್ಯ ಸಿಹಿ– ಕಲಾವತಿ (ತುರುವೇಕೆರೆ) ರೇಖಾ (ಚಿಕ್ಕನಾಯಕನಹಳ್ಳಿ) ಶಾರದಮ್ಮ (ಕುಣಿಗಲ್‌).

ಜಾಗೃತಿ ಜಾಥಾ

ಸಿರಿಧಾನ್ಯ ಉತ್ಪನ್ನಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಜಾಥಾ ಏರ್ಪಡಿಸಲಾಗಿತ್ತು. ಟೌನ್‌ಹಾಲ್‌ ವೃತ್ತದಲ್ಲಿ ಬಲೂನು ಹಾರಿ ಬಿಡುವ ಮೂಲಕ ಜಾಥಾಗೆ ಚಾಲನೆ ನೀಡಲಾಯಿತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್‌ ಕಲ್ಲಣ್ಣನವರ್‌ ಉಪ ನಿರ್ದೇಶಕ ಹುಲಿರಾಜ್ ಸಹಾಯಕ ನಿರ್ದೇಶಕರಾದ ಆಶಾಜ್ಯೋತಿ ಗಿರಿಜಮ್ಮ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.