
ತುಮಕೂರು: ಈ ವಾರ ತರಕಾರಿ ಮತ್ತಷ್ಟು ಅಗ್ಗವಾಗಿದ್ದು, ಸೊಪ್ಪು ಕೊಂಚವಷ್ಟೇ ಚೇತರಿಸಿಕೊಂಡಿದೆ. ಕೋಳಿ ಮಾಂಸ ಮತ್ತೆ ದುಬಾರಿಯಾಗಿದೆ. ದ್ರಾಕ್ಷಿ ಹಣ್ಣಿನ ಬೆಲೆ ಕಡಿಮೆಯಾಗಿದ್ದು, ಕರಬೂಜ ಏರಿಕೆ ದಾಖಲಿಸಿದೆ.
ದುಬಾರಿ ಸ್ಥಿತಿಯಲ್ಲೇ ಇದ್ದ ಬೀನ್ಸ್ ಇಳಿಕೆಯತ್ತ ಹೆಜ್ಜೆ ಹಾಕಿದೆ. ಬದನೆಕಾಯಿ, ಮೂಲಂಗಿ, ನುಗ್ಗೆಕಾಯಿ ಕೊಂಚ ಏರಿಕೆ ಆಗಿರುವುದನ್ನು ಹೊರತುಪಡಿಸಿದರೆ ಉಳಿದ ತರಕಾರಿಗಳ ದರ ಇಳಿಕೆಯಾಗಿದೆ. ಕ್ಯಾರೇಟ್, ಬೀಟ್ರೂಟ್, ಟೊಮೆಟೊ, ಆಲೂಗೆಡ್ಡೆ, ಗೆಡ್ಡೆಕೋಸು ಮತ್ತಷ್ಟು ಕಡಿಮೆಯಾಗಿದೆ. ನಿಂಬೆಹಣ್ಣು ಏರಿಕೆಯತ್ತ ಮುಖ ಮಾಡಿದೆ.
ಸಬ್ಬಕ್ಕಿ ಏರಿಕೆ: ಕೊತ್ತಂಬರಿ ಸೊಪ್ಪಿನ ದರ ಕಡಿಮೆಯಾಗಿದ್ದರೆ, ಸಬ್ಬಕ್ಕಿ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40ಕ್ಕೆ, ಸಬ್ಬಕ್ಕಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.
ಕರಬೂಜ ದುಬಾರಿ: ಬೇಸಿಗೆಯಲ್ಲಿ ತಂಪುಪಾನೀಯ, ಜೂಸ್ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಹಣ್ಣುಗಳ ಧಾರಣೆ ಏರುಮುಖವಾಗಿದೆ. ಕರಬೂಜ ಮತ್ತಷ್ಟು ದುಬಾರಿಯಾಗಿದೆ. ದ್ರಾಕ್ಷಿ ಕೆ.ಜಿ ₹100ಕ್ಕೆ ಸಿಗುತ್ತಿದೆ. ಉಳಿದ ಹಣ್ಣುಗಳ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಅಡುಗೆ ಎಣ್ಣೆ: ಕಡಲೆಕಾಯಿ ಎಣ್ಣೆ ಏರಿಕೆಯತ್ತ ಮುಖ ಮಾಡಿದ್ದರೆ, ಇತರೆ ಎಣ್ಣೆ ಇಳಿಕೆಯತ್ತ ಸಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹165–166, ಪಾಮಾಯಿಲ್ ಕೆ.ಜಿ ₹125–126ಕ್ಕೆ ಇಳಿದಿದ್ದರೆ, ಕಡಲೆಕಾಯಿ ಎಣ್ಣೆ ಕೆ.ಜಿ ₹180–185ಕ್ಕೆ ಹೆಚ್ಚಳವಾಗಿದೆ.
ಬೇಳೆ–ಧಾನ್ಯ: ಕಡಲೆಕಾಳು ಒಮ್ಮೆಲೆ ಕೆ.ಜಿ.ಗೆ ₹7–8 ಏರಿಕೆಯಾಗಿದ್ದು, ಹೆಸರುಕಾಳು ಅಲ್ಪ ಹೆಚ್ಚಳ ದಾಖಲಿಸಿದೆ. ತೊಗರಿಬೇಳೆ, ಹುರಿಗಡಲೆ ಕೊಂಚ ತಗ್ಗಿದೆ.
ಬ್ಯಾಡಗಿ ಇಳಿಕೆ: ಬ್ಯಾಡಗಿ ಮೆಣಸಿನಕಾಯಿ ದುಬಾರಿ ಸ್ಥಿತಿಯಲ್ಲೇ ಇದ್ದರೂ ಕೆ.ಜಿ.ಗೆ ₹40 ಇಳಿಕೆಯಾಗಿದೆ. ಲವಂಗ, ಗಸಗಸೆ ಅಲ್ಪ ಕಡಿಮೆಯಾಗಿದೆ.
ಧನ್ಯ ಕೆ.ಜಿ ₹130–140, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹440–450, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹210–220, ಕಾಳುಮೆಣಸು ಕೆ.ಜಿ ₹740–760, ಜೀರಿಗೆ ಕೆ.ಜಿ ₹270–290, ಚಕ್ಕೆ ಕೆ.ಜಿ ₹275–280, ಲವಂಗ ಕೆ.ಜಿ ₹760–780, ಗುಣಮಟ್ಟದ ಗಸಗಸೆ ಕೆ.ಜಿ ₹1,400–1,500, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹860–880, ಗೋಡಂಬಿ ಕೆ.ಜಿ ₹800–950, ಒಣದ್ರಾಕ್ಷಿ ಕೆ.ಜಿ ₹430–450ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ದುಬಾರಿ: ಕೋಳಿ ಮಾಂಸದ ಬೆಲೆ ಏರಿಕೆಯತ್ತಲೇ ಸಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹180, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹285, ಫಾರಂ ಕೋಳಿ ಕೆ.ಜಿ ₹120ಕ್ಕೆ ಹೆಚ್ಚಳವಾಗಿದೆ. ಮೊಟ್ಟೆ ₹5.35ಕ್ಕೆ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.