ADVERTISEMENT

ಆನ್‌ಲೈನ್‌ ಟ್ರೇಡಿಂಗ್‌: ತುಮಕೂರು ವ್ಯಕ್ತಿಗೆ ₹5 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 20:53 IST
Last Updated 21 ಆಗಸ್ಟ್ 2025, 20:53 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಉಪ್ಪಾರಹಳ್ಳಿಯ ಎಂ.ಡಿ.ಖಾಜಾ ಮೋಹಿಯುದ್ದೀನ್‌ ₹5.87 ಲಕ್ಷ ಕಳೆದುಕೊಂಡಿದ್ದಾರೆ.

ಮೋಹಿಯುದ್ದೀನ್‌ ಎಚ್‌ಎಂಎಸ್‌ ಐಟಿಐ ಕಾಲೇಜಿನಲ್ಲಿ ಪ್ರಯೋಗಾಲಯ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆರೋಪಿಗಳು ವಾಟ್ಸ್‌ ಆ್ಯಪ್‌ ಮುಖಾಂತರ ಮೆಸೇಜ್‌ ಮಾಡಿ, ಟ್ರೇಡಿಂಗ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಅವರು ಕಳುಹಿಸಿದ ಲಿಂಕ್‌ ಕ್ಲಿಕ್ಕಿಸಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಸದರಿ ಆ್ಯಪ್‌ನಲ್ಲಿ ಹಣ ಹೂಡಿಕೆ ಕುರಿತು ವಿವರಿಸಿದ್ದಾರೆ. ಹಂತ ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟು ₹6.06 ಲಕ್ಷ ವರ್ಗಾಯಿಸಿದ್ದಾರೆ. ಇದರಲ್ಲಿ ಅವರಿಗೆ ಕೇವಲ ₹20 ಸಾವಿರ ವಾಪಸ್‌ ಬಂದಿದೆ. ಹಣ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

ಗ್ರಾ.ಪಂ ಕಾರ್ಯದರ್ಶಿಗೂ ₹97 ಸಾವಿರ ವಂಚನೆ

ತುಮಕೂರು: ಯಾವುದೇ ಲಿಂಕ್‌ ಕ್ಲಿಕ್‌ ಮಾಡದೇ ಇದ್ದರೂ ಒಟಿಪಿ ಹಂಚಿಕೊಳ್ಳದಿದ್ದರೂ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಖಾತೆಯಿಂದ ಇದೇ ರೀತಿಯಾಗಿ ಹಣ ಎಗರಿಸಲಾಗಿದೆ. ತಾಲ್ಲೂಕಿನ ಹೆಬ್ಬೂರು ಹೋಬಳಿ ಕೆಲ್ಕೆರೆ ನಿವಾಸಿ ಬೆಳಗುಂಬ ಗ್ರಾ.ಪಂ ಕಾರ್ಯದರ್ಶಿ ಮರಿಸಾಸಲಯ್ಯ ಖಾತೆಯಿಂದ 4 ಹಂತದಲ್ಲಿ ಒಟ್ಟು ₹97999 ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ರಾತ್ರಿ 9 ಗಂಟೆಯ ನಂತರ ಹಣ ಕಡಿತದ ಬಗ್ಗೆ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಬ್ಯಾಂಕ್‌ನಲ್ಲಿ ಹೋಗಿ ವಿಚಾರಿಸಿದಾಗ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಖಚಿತವಾಗಿದೆ. ‘ಎಲೆಕ್ಟ್ರಾನಿಕ್‌ ಉಪಕರಣ ಬಳಸಿಕೊಂಡು ಹಣ ವಂಚಿಸಲಾಗಿದೆ. ಸ್ನೇಹಿತರ ಬಳಿ ವಿಚಾರಿಸಿ ತಡವಾಗಿ ದೂರು ನೀಡುತ್ತಿದ್ದೇನೆ. ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಕೋರಿ ಹೆಬ್ಬೂರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.