ADVERTISEMENT

ತುಮಕೂರು | ಪಿಎಂ ಕಿಸಾನ್ ಸಮ್ಮಾನ್: 19ನೇ ಕಂತು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 13:44 IST
Last Updated 24 ಫೆಬ್ರುವರಿ 2025, 13:44 IST
ಪಿಎಂ ಕಿಸಾನ್ ಯೋಜನೆಯ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸ್ತ್ರೀಶಕ್ತಿ ಸ್ವಸಹಾಯ ಸಂಘದಿಂದ ಪ್ರದರ್ಶನವಿಟ್ಟಿದ್ದ ವಸ್ತುಗಳನ್ನು ಖರೀದಿಸಿದರು
ಪಿಎಂ ಕಿಸಾನ್ ಯೋಜನೆಯ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸ್ತ್ರೀಶಕ್ತಿ ಸ್ವಸಹಾಯ ಸಂಘದಿಂದ ಪ್ರದರ್ಶನವಿಟ್ಟಿದ್ದ ವಸ್ತುಗಳನ್ನು ಖರೀದಿಸಿದರು   

ತಿಪಟೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸರ್ಕಾರ ಕಳೆದ 10 ವರ್ಷಗಳಲ್ಲಿ ರೈತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ರೈತರ ಭವಿಷ್ಯ ಉಜ್ವಲವಾಗಿದೆ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಆಯೋಜಿಸಲಾಗಿದ್ದ ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 19ನೇ ಕಂತಿನ ಹಣ ವರ್ಗಾವಣೆ ನೇರಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ತುಮಕೂರು ಜಿಲ್ಲೆಯ 2,42,447 ಫಲಾನುಭವಿಗಳಿಗೆ ₹48.49ಕೋಟಿ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ ಎಂದರು.

ADVERTISEMENT

ದೇಶದ 9.7ಕೋಟಿ ಕುಟುಂಬಗಳಿಗೆ ₹22ಸಾವಿರ ಕೋಟಿಯನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದ್ದು ಕೃಷಿಗೆ ಸಹಕಾರಿಯಾಗಿದೆ. ಕಳೆದ ಆರು ವರ್ಷಗಳಲ್ಲಿ ರಾಜ್ಯದ ಸುಮಾರು 46ಲಕ್ಷ ರೈತರಿಗೆ ₹17,103ಕೋಟಿ ವರ್ಗಾಯಿಸಲಾಗಿದೆ. ರಾಜ್ಯದ 44.2 ಲಕ್ಷ ರೈತರಿಗೆ ₹884ಕೋಟಿ ಮೊತ್ತವನ್ನು ವರ್ಗಾಯಿಸಲಾಗಿದೆ ಎಂದರು.

ಜನವರಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರೈತರ ಕಲ್ಯಾಣ ಹಾಗೂ ಕೃಷಿಗೆ ಪ್ರೋತ್ಸಾಹ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. 2025-26ರಲ್ಲಿಯೂ ಪ್ರಧಾನಮಂತ್ರಿ ಫಸಲ್‌ಭೀಮಾ ಯೋಜನೆ ಮುಂದುವರೆಸಲು ಅನುಮೋದನೆ ನೀಡಿದೆ. ರಸಗೊಬ್ಬರಕ್ಕೆ ಹೆಚ್ಚುವರಿ ಸಬ್ಸಿಡಿ ನೀಡಲಾಗುವುದು ಎಂದರು.

ದೇಶದ ನೂರು ಕೃಷಿಪ್ರಧಾನ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಪ್ರಾರಂಭಿಸಲು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕಿಸಾನ್‌ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು ₹3ರಿಂದ ₹5ಲಕ್ಷಕ್ಕೆ ಹೆಚ್ಚಿಸಲಾಗಿದೆ. ದೇಶೀಯ ರಸಗೊಬ್ಬರ ಉತ್ಪಾದನೆ ಬಲಪಡಿಸಲು ಅಸ್ಸಾಂನಲ್ಲಿ 12.7ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಯೂರಿಯಾ ಸ್ಥಾವರ ಸ್ಥಾಪಿಸಲಾಗುವುದು ಎಂದರು.

ಶಾಸಕ ಜ್ಯೋತಿಗಣೇಶ್, ಸುರೇಶ್‌ಗೌಡ, ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್, ರವಿಹೆಬ್ಬಾಕ, ತಹಶೀಲ್ದಾರ್ ಪವನ್‌ಕುಮಾರ್, ಕೃಷಿ ವಿಸ್ತರಣಾಧಿಕಾರಿ ಶಿವಲಿಂಗಯ್ಯ, ದಿಶಾ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಗೋವಿಂದೇಗೌಡ, ಡಾ.ನಂದೀಶ್, ಪವನ್, ಚಂದ್ರಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.