ADVERTISEMENT

ತುಮಕೂರು | ದಸರಾ: ಭುವಿಯಲ್ಲಿ ನಕ್ಷತ್ರಗಳ ಪರಿಷೆ

23 ಕಿಲೊ ಮೀಟರ್ ವಿದ್ಯುತ್‌ ದೀಪಾಲಂಕಾರ; ಅಂದಾಜು ₹41 ಲಕ್ಷ ಖರ್ಚು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:11 IST
Last Updated 24 ಸೆಪ್ಟೆಂಬರ್ 2025, 7:11 IST
ತುಮಕೂರಿನ ರಾಧಾಕೃಷ್ಣ ರಸ್ತೆಯ ವಿದ್ಯುತ್‌ ದೀಪಾಲಂಕಾರ
–ಚಿತ್ರಗಳು: ಚಂದನ್‌
ತುಮಕೂರಿನ ರಾಧಾಕೃಷ್ಣ ರಸ್ತೆಯ ವಿದ್ಯುತ್‌ ದೀಪಾಲಂಕಾರ –ಚಿತ್ರಗಳು: ಚಂದನ್‌   

ತುಮಕೂರು: ದಸರಾ ಪ್ರಯುಕ್ತ ನಗರ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಒಂದು ಸುತ್ತು ಹಾಕಿದರೆ ಆಕಾಶದ ನಕ್ಷತ್ರಗಳು ಧರೆಗಿಳಿದಂತೆ ಭಾಸವಾಗುತ್ತದೆ.

ವಿದ್ಯುತ್ ದೀಪಗಳು ದಸರಾದ ಮೆರುಗು ಹೆಚ್ಚಿಸಿವೆ. ಸಂಜೆಯ ನಂತರ ಸಾಲು ಸಾಲು ದೀಪಗಳು ಬೆಳಗುತ್ತವೆ. ತನ್ನತ್ತ ಕಣ್ಣೆತ್ತಿ ನೋಡುವ ಜನರಿಗೆ ಭವ್ಯ ಸ್ವಾಗತ‌ ಕೋರುತ್ತದೆ. ಸಂಚಾರ ದಟ್ಟಣೆ, ವಾಹನಗಳ ಕಿರಿಕಿರಿ, ಅತಿಯಾದ ಶಬ್ದಗಳಿಂದ ತುಂಬಿರುತ್ತಿದ್ದ ರಸ್ತೆಗಳು ಈಗ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಟೌನ್‌ಹಾಲ್, ಬಿ.ಎಚ್.ರಸ್ತೆಯಲ್ಲಿನ ದೀಪಾಲಂಕಾರ ಗಮನ ಸೆಳೆಯುತ್ತಿದೆ.

ಇಡೀ ನಗರದ ಪೈಕಿ ರಾಧಾಕೃಷ್ಣ ರಸ್ತೆಯ ಅಲಂಕಾರ ಹೆಚ್ಚು ಆಕರ್ಷಣೀಯವಾಗಿದೆ. ಜನರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ರಸ್ತೆ ಮಧ್ಯದ ಫುಟ್‌ಪಾತ್‌ನಲ್ಲಿರುವ ಗಿಡಗಳಿಗೆ ದೀಪಗಳು ಬಳ್ಳಿಯಂತೆ ಹಬ್ಬಿವೆ.‌ ರೆಂಬೆಗಳಿಗೆ ನೇತಾಕಿರುವ ದೀಪಗಳು ನೋಡುಗರ ಮೆಚ್ಚುಗೆ ಪಡೆಯುತ್ತಿವೆ.

ADVERTISEMENT

ಕಳೆದ ವರ್ಷ ಮೊದಲ ಬಾರಿಗೆ ಜಿಲ್ಲಾ ಆಡಳಿತದಿಂದ ದಸರಾ ಆಚರಿಸಲಾಯಿತು. ಆಗ ನಗರದ 12 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ‌ಈಗ ಅದು ದುಪ್ಪಟ್ಟಾಗಿದೆ. ಈ ಬಾರಿ ಸುಮಾರು 23 ಕಿ.ಮೀ ರಸ್ತೆಗಳು ವಿವಿಧ ಬಣ್ಣಗಳಿಂದ ಮೈದುಂಬಿಕೊಂಡಿವೆ.

ಕಾಲ್‌ಟೆಕ್ಸ್‌, ಟೌನ್‌ಹಾಲ್‌, ಭದ್ರಮ್ಮ ಛತ್ರ ವೃತ್ತ, ಎಸ್‌.ಎಸ್‌.ವೃತ್ತ, ಸ್ವಾತಂತ್ರ್ಯ ಚೌಕ, ಕೋಟೆ ಆಂಜನೇಯ ಸ್ವಾಮಿ ದೇಗುಲದ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ, ಗುಂಚಿ ವೃತ್ತ, ಅಶೋಕ ರಸ್ತೆ, ಕುಣಿಗಲ್‌ ರಸ್ತೆ ಸೇರಿ ಪ್ರಮುಖ ವೃತ್ತ, ರಸ್ತೆಗಳನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ.

ವಿವಿಧ ಬಗೆಯ ಅಲಂಕಾರದ ದೀಪಗಳನ್ನು ಕಣ್ತುಂಬಿಕೊಳ್ಳಲು ಜನ ಆಸಕ್ತಿ ತೋರುತ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಯಾದರೂ ನಗರ ಸುತ್ತುವುದು ಸಾಮಾನ್ಯವಾಗಿದೆ. ಮಕ್ಕಳು, ಮಹಿಳೆಯರು ಸೇರಿ ಎಲ್ಲರು ವಿದ್ಯುತ್ ದೀಪಾಲಂಕಾರಕ್ಕೆ ಮನ ಸೋತಿದ್ದಾರೆ. ಅಲಂಕಾರಿಕ ದೀಪಗಳ ಮುಂದೆ ನಿಂತು ಸೆಲ್ಫಿ, ವಿಡಿಯೊ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ಬಾರಿ ಜಂಬೂ ಸವಾರಿಗೆ ಇನ್ನೂ ಐದಾರು ದಿನ ಇರುವಾಗ ದೀಪಾಲಂಕಾರಕ್ಕೆ ಚಾಲನೆ ನೀಡಲಾಗಿತ್ತು. ಈ ಬಾರಿ ದಸರಾ ಪ್ರಾರಂಭದ ದಿನವೇ ನಗರ ದೀಪಗಳಿಂದ ಸಿಂಗಾರಗೊಂಡಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದಕ್ಕಾಗಿ ಅಂದಾಜು ₹41 ಲಕ್ಷ ಖರ್ಚು ಮಾಡಲಾಗುತ್ತಿದೆ.

ಟೌನ್‌ಹಾಲ್‌ ವೃತ್ತದ ಬಳಿ ಕಲಾಕೃತಿ
ದೀಪಗಳಿಂದ ಕಂಗೊಳಿಸುತ್ತಿರುವ ಎಂ.ಜಿ.ರಸ್ತೆ
ರಾಧಾಕೃಷ್ಣ ರಸ್ತೆಯ ಫುಟ್‌ಪಾತ್‌
ಗಮನ ಸೆಳೆದ ಕಂಬಳ ಕಲಾಕೃತಿ
ಅಶೋಕ ರಸ್ತೆ ಸಿಂಗಾರಗೊಂಡಿರುವುದು

ಕಲಾಕೃತಿಯ ಸೊಬಗು ಇದೇ ಮೊದಲ ಬಾರಿಗೆ ಪ್ರಮುಖ ವೃತ್ತಗಳಲ್ಲಿ ಹಲವು ಬಗೆಯ ಕಲಾಕೃತಿ ರಚಿಸಲಾಗಿದೆ. ಇದರಿಂದಾಗಿ ದೀಪಾಲಂಕಾರದ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಭದ್ರಮ್ಮ ಛತ್ರ ವೃತ್ತದ ಬಳಿ ಚಾಮುಂಡೇಶ್ವರಿ ದೇವಿ ಟೌನ್‌ಹಾಲ್‌ ಹತ್ತಿರ ಕನ್ನಡಾಂಬೆ ಮತ್ತು ಕರ್ನಾಟಕ ಭೂಪಟ ಎಸ್‌.ಎಸ್‌.ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಸ್ವಾತಂತ್ರ್ಯ ಚೌಕದಲ್ಲಿ ಗಾಂಧೀಜಿ ಮತ್ತು ಭಾರತ ಭೂಪಟ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗಂಡಭೇರುಂಡ ಸೇರಿ ಇತರೆ ಕಲಾಕೃತಿಗಳು ಜನರ ಕಣ್ಮನ ಸೆಳೆಯುತ್ತಿವೆ.

- ದಸರಾದಲ್ಲಿ ಇಂದು ದೇವಿಗೆ ಮೀನಾಕ್ಷಿ ಅಲಂಕಾರ. ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಿದ್ಧಲಿಂಗಯ್ಯ ತಂಡದಿಂದ ಹಿಂದೂಸ್ತಾನಿ ಸಂಗೀತ ಬಿ.ಎಸ್‌.ಮಲ್ಲಿಕಾರ್ಜುನ ತಂಡದಿಂದ ಸುಗಮ ಸಂಗೀತ ಎನ್‌.ಕೆ.ಮೋಹನ್‌ಕುಮಾರ್‌ ತಂಡದಿಂದ ಕಥಾ ಕೀರ್ತನ ಕುಣಿಗಲ್‌ನ ಸ್ಟೆಲ್ಲಾ ಮೇರಿಸ್‌ ಶಾಲೆಯಿಂದ ಜಾನಪದ ನೃತ್ಯ ಅನನ್ಯ ಪದವಿ ಪೂರ್ವ ಕಾಲೇಜು ಮಕ್ಕಳಿಂದ ನೃತ್ಯ ರೂಪಕ ವಿ.ವಿ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಶಾರದ ಸ್ಕೂಲ್‌ ಆಫ್‌ ಫೈನ್‌ ಆರ್ಟ್ಸ್‌ ಶಾಲೆಯ ಮಕ್ಕಳಿಂದ ಶಾಸ್ತ್ರೀಯ ನೃತ್ಯ ತೇಜಸ್ವಿನಿ ಗಾನ ಕಲಾವೃಂದದಿಂದ ಜಾನಪದ ಗೀತೆ ಗಾಯನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.