ತುಮಕೂರು: ತುಮಕೂರು ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಜುಲೈ 8ರಂದು ನಡೆಯಲಿದ್ದು, ಈ ಬಾರಿ 76 ವಿದ್ಯಾರ್ಥಿಗಳಿಗೆ 106 ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ.
2 ಡಿ.ಲಿಟ್, 59 ಪಿಎಚ್.ಡಿ, 1,911 ಸ್ನಾತಕೋತ್ತರ, 9,438 ಪದವಿ ಸೇರಿದಂತೆ 11,349 ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಈ ಬಾರಿಯೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ 6,863 ಮಂದಿ (ಪುರುಷರು 4,486) ಪದವಿ ಪಡೆದುಕೊಳ್ಳುತ್ತಿದ್ದಾರೆ.
ಸ್ನಾತಕೋತ್ತರ ಕನ್ನಡ ವಿಭಾಗದ ಎಂ.ಜಯರಾಮು 5, ಗಣಿತ ವಿಭಾಗದ ಎಚ್.ಆರ್.ವೈಷ್ಣವಿ 5 ಚಿನ್ನದ ಪದಕ ಪಡೆದುಕೊಂಡಿದ್ದು, ಅತಿ ಹೆಚ್ಚು ಸ್ವರ್ಣ ಪದಕ ಮುಡಿಗೇರಿಸಿಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ವಾಣಿಜ್ಯ ವಿಭಾಗದ ಬಿ.ಆರ್.ರಂಜಿತಾ, ರಸಾಯನಶಾಸ್ತ್ರ ವಿಭಾಗದ ಎಂ.ವಿ.ಯೋಗೇಶ್, ಪ್ರಾಣಿಶಾಸ್ತ್ರ ವಿಭಾಗದ ಎಚ್.ಹೇಮಲತಾ ತಲಾ ಮೂರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅರ್ಥಶಾಸ್ತ್ರ ವಿಭಾಗದ ಎನ್.ಪಲ್ಲವಿ, ರಾಜ್ಯಶಾಸ್ತ್ರ ವಿಭಾಗದ ಸಿ.ಜಿ.ಚೈತ್ರಾ, ಪತ್ರಿಕೋದ್ಯಮ ವಿಭಾಗದ ಮಂಜುನಾಥ್, ವಾಣಿಜ್ಯ ವಿಭಾಗದ ಬಿ.ಆರ್.ರಾಧಾ, ಸಸ್ಯಶಾಸ್ತ್ರ ವಿಭಾಗದ ಟಿ.ಎಸ್.ವೈಷ್ಣವಿ, ಪ್ರಾಣಿಶಾಸ್ತ್ರ ವಿಭಾಗದ ಎಚ್.ಕೆ.ಶ್ರೀಧರ್ ತಲಾ ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ಮಾಹಿತಿ ಹಂಚಿಕೊಂಡರು.
ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಕುಲಸಚಿವ (ಆಡಳಿತ–ಪ್ರಭಾರ) ಪ್ರೊ.ಎಂ.ಕೊಟ್ರೇಶ್, ಕುಲಸಚಿವ (ಪರೀಕ್ಷಾಂಗ) ಪ್ರೊ.ಎನ್.ಸತೀಶ್‌ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪದವಿ ಫಲಿತಾಂಶ ಕುಸಿತ
ತುಮಕೂರು: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪದವಿ ಫಲಿತಾಂಶ ಮತ್ತೆ ಕುಸಿತ ಕಂಡಿದ್ದು ಶೇ 53.42ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ 56.83ರಷ್ಟು ಫಲಿತಾಂಶ ದಾಖಲಾಗಿತ್ತು.
ಫಲಿತಾಂಶದ ವಿವರ (ಆವರಣದಲ್ಲಿ ಹಿಂದಿನ ವರ್ಷದ ಮಾಹಿತಿ):
ಬಿ.ಎನಲ್ಲಿ ಶೇ 45.04 (ಶೇ 54.27) ಬಿಎಸ್‌ಡ್ಲ್ಯೂ ಶೇ 48.72 (ಶೇ 77.27) ಬಿಕಾಂ ಶೇ 48.41 (ಶೇ 52.69) ಬಿಬಿಎಂ ಶೇ 61 (ಶೇ 54.83) ಬಿಎಸ್‌ಸಿ ಶೇ 50.72 (ಶೇ 51.49) ಬಿಸಿಎ ಶೇ 72.75 (ಶೇ 71.29) ಬಿಇಡಿ ಶೇ 80.49ರಷ್ಟು (ಶೇ 74.76) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಶೇ 89.34ರಷ್ಟು (ಶೇ 92.24) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.