ADVERTISEMENT

ತುಮಕೂರು ರೈಲು ನಿಲ್ದಾಣಕ್ಕೆ ಹೊಸ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 6:35 IST
Last Updated 6 ಜನವರಿ 2024, 6:35 IST
ತುಮಕೂರು ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ
ತುಮಕೂರು ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ   

ತುಮಕೂರು: ಪ್ರತಿ ನಿತ್ಯ ಸಾವಿರಾರು ಜನರು ಓಡಾಡುವ, ಹೆಚ್ಚಿನ ಜನ ಸಂದಣಿ ಸೇರುವ ನಗರದ ರೈಲು ನಿಲ್ದಾಣದ ಅಭಿವೃದ್ಧಿಗೆ ರೈಲ್ವೆ ಇಲಾಖೆ ಕೊನೆಗೂ ನೀಲನಕ್ಷೆ ರೂಪಿಸಿದೆ. ₹16 ಕೋಟಿ ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಅಮೃತ ಭಾರತ್‌ ಮಿಷನ್‌ ಯೋಜನೆಯಡಿ ರೈಲು ನಿಲ್ದಾಣದಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಜನರ ಓಡಾಟಕ್ಕೆ ಅಗತ್ಯವಾಗಿ ಬೇಕಾದ ಹೆಚ್ಚುವರಿ ಲಿಫ್ಟ್‌, ಎಕ್ಸಲೆಟರ್‌ ನಿರ್ಮಿಸಲಾಗುತ್ತಿದೆ. ವಾಹನಗಳ ನಿಲುಗಡೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಈಗಾಗಲೇ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಪ್ರಯಾಣಿಕರ ನಿಲುಗಡೆಗೆ ಅಗತ್ಯವಾಗಿ ಬೇಕಾದ ಶೆಲ್ಟರ್‌ ವಿಸ್ತರಣೆಯ ಕಾರ್ಯ ಆರಂಭವಾಗಿದೆ.

ADVERTISEMENT

ರೈಲು ನಿಲ್ದಾಣದ ಹತ್ತಿರ ಪ್ರಸ್ತುತ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ರೈಲು ಪ್ರಯಾಣಿಕರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಬಂದ ಪ್ರತಿ ಸಾರಿ ಕೆಸರು ಗದ್ದೆಯಂತೆ ಆಗುವ ಸ್ಥಳದಲ್ಲಿಯೇ ಬೈಕ್‌ಗಳನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಾಹನಗಳ ನಿಲುಗಡೆಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ರೈಲ್ವೆ ಅಧಿಕಾರಿಗಳಿಗೆ ಪ್ರಯಾಣಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಪ್ರಯಾಣಿಕರ ಒತ್ತಾಯಕ್ಕೆ ಸ್ಪಂದನೆ ಸಿಕ್ಕಿದೆ. ಒಂದು ಕಟ್ಟಡ ನಿರ್ಮಿಸಿ, ವಾಹನಗಳ ನಿಲುಗಡೆಗೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.

ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳ ಸಮಸ್ಯೆ ತುಂಬಾ ಇದೆ. ನಿತ್ಯ ಹತ್ತಾರು ರೈಲುಗಳು ತುಮಕೂರು ನಿಲ್ದಾಣದ ಮುಖಾಂತರ ಹಾದು ಹೋಗುತ್ತವೆ. ಇಲ್ಲಿ ಕನಿಷ್ಠ ಇನ್ನೂ ಮೂರು ಪ್ಲಾಟ್‌ ಫಾರ್ಮ್‌ಗಳ ಅವಶ್ಯಕತೆ ಇದೆ. ಆದರೆ ಈ ಕೊರತೆ ನೀಗಿಸಲು ಜಾಗದ ಸಮಸ್ಯೆಯಾಗುತ್ತಿದೆ. ಪ್ಲಾಟ್‌ ಫಾರ್ಮ್‌ ಸಂಖ್ಯೆ ಹೆಚ್ಚಳಕ್ಕೆ ಸ್ಥಳಾವಕಾಶವೇ ಇಲ್ಲವಾಗಿದೆ.

‘ಶಾಂತಿನಗರದ ಕಡೆ ಜನ ವಸತಿ ಪ್ರದೇಶವಿದೆ. ಮತ್ತೊಂದು ಕಡೆಯಲ್ಲಿ ನಿಲ್ದಾಣದ ಕಚೇರಿ ಇದೆ. ಇದರಿಂದ ಪ್ಲಾಟ್‌ಫಾರ್ಮ್‌ ಸಂಖ್ಯೆ ಹೆಚ್ಚಿಸುವುದು ಕಷ್ಟವಾಗುತ್ತಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದರು.

ನಿಲ್ದಾಣದಲ್ಲಿ ಕೇವಲ ಒಂದು ಸ್ಕೈವಾಕ್‌ ಮಾತ್ರ ಇದ್ದು, ಮತ್ತೊಂದು ಸ್ಕೈವಾಕ್‌ ನಿರ್ಮಿಸಬೇಕು ಎಂಬುವುದು ರೈಲು ಪ್ರಯಾಣಿಕರ ಒತ್ತಾಯ. ಪ್ರಸ್ತುತ ಇದಕ್ಕೆ ಅಧಿಕಾರಿಗಳು ಗಮನ ಹರಿಸಿಲ್ಲ. ‘ಅಭಿವೃದ್ಧಿ ಕಾಮಗಾರಿಗಳ ಜತೆಗೆ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಕುಡಿಯುವ ನೀರು, ಶೌಚಾಲಯಗಳ ಸಂಖ್ಯೆ ಹೆಚ್ಚಿಸಬೇಕು. ಲಿಫ್ಟ್‌ ಸದಾ ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ರೈಲು ಪ್ರಯಾಣಿಕ ಸಂಚಿತ್‌ ಒತ್ತಾಯಿಸಿದರು.

ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಿಲ್ದಾಣಕ್ಕೆ ಹೊಸ ರೂಪ ನೀಡಲಾಗುತ್ತದೆ. ಶೆಲ್ಟರ್‌ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ.
ಎ.ಎಲ್.ನಾಗರಾಜ್‌, ವ್ಯವಸ್ಥಾಪಕ, ತುಮಕೂರು ರೈಲು ನಿಲ್ದಾಣ
ತುಮಕೂರು ರೈಲು ನಿಲ್ದಾಣ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ನಿಲ್ದಾಣದಲ್ಲಿ ಅಂಗವಿಕಲರು ವ್ಹೀಲ್‌ಚೇರ್‌ನಲ್ಲಿ ಓಡಾಡಲು ಬೇಕಾದ ವ್ಯವಸ್ಥೆ ಮಾಡಬೇಕು.  ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು ಜನರ ಓಡಾಟವೂ ಜಾಸ್ತಿ ಇದೆ. ಜನರ ಅನುಕೂಲಕ್ಕಾಗಿ ರೈಲು ನಿಲ್ದಾಣದಲ್ಲಿ ಟ್ರ್ಯಾಕ್‌ಗಳನ್ನು ಹೆಚ್ಚಿಸಬೇಕು.
ಬಾ.ಹ.ರಮಾಕುಮಾರಿ, ಅಧ್ಯಕ್ಷರು, ರೈಲು ಪ್ರಯಾಣಿಕರ ವೇದಿಕೆ
ಎಂಟು ವರ್ಷದ ಬೇಡಿಕೆ ರೈಲು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವಂತೆ ಕಳೆದ ಎಂಟು ವರ್ಷಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದೇವೆ. ಕೊನೆಗೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಇದು ತುಂಬಾ ಜನರಿಗೆ ಸಹಾಯವಾಗಲಿದೆ. ನಿಲ್ದಾಣದಲ್ಲಿ ಉತ್ತಮ ಕೆಲಸಗಳು ಆಗುತ್ತಿವೆ.
ಕರಣಂ ರಮೇಶ್, ಕಾರ್ಯದರ್ಶಿ, ರೈಲು ಪ್ರಯಾಣಿಕರ ವೇದಿಕೆ
ತುಮಕೂರು ರೈಲು ನಿಲ್ದಾಣದ ಬಳಿಯ ಕೆಳ ಸೇತುವೆ ನಿರ್ಮಾಣದ ಜಾಗದಲ್ಲಿ ಗಿಡಗಳು ಬೆಳೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.