ADVERTISEMENT

ತುಮಕೂರು: ಮಾಸ್ಕ್ ನೆಪದಲ್ಲಿ ಹೆಲ್ಮೆಟ್ ಮರೆತರು

ಅನಿಲ್ ಕುಮಾರ್ ಜಿ
Published 11 ಮೇ 2020, 20:15 IST
Last Updated 11 ಮೇ 2020, 20:15 IST
ತುಮಕೂರು ಬಿ.ಎಚ್.ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು
ತುಮಕೂರು ಬಿ.ಎಚ್.ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು   

ತುಮಕೂರು: ಮುಖಗವಸು ಧರಿಸುವ ಬಗ್ಗೆಯೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ದ್ವಿಚಕ್ರ ವಾಹನ ಸವಾರರಿಗೆ ವರದಾನವಾಗಿದೆ. ಅನೇಕರು ಹೆಲ್ಮೆಟ್‌ ಧರಿಸದೇ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.

ಲಾಕ್‌ಡೌನ್‌ಗೂ ಮುನ್ನ ನಗರದಲ್ಲಿ ದ್ವಿಚಕ್ರ ವಾಹನ ಪ್ರಯಾಣಿಕರು ಹೆಲ್ಮೆಟ್‌ ಧರಿಸಿ ಪ್ರಯಾಣಿಸುತ್ತಿದ್ದರು. ಇದೀಗ ಬಹುತೇಕರು ಹೆಲ್ಮೆಟ್ ಧರಿಸದೆ ಪ್ರಯಾಣಿಸುವುದು ಕಂಡುಬರುತ್ತದೆ. ಪೊಲೀಸರು ಸಹ ಈ ಬಗ್ಗೆ ಮೃದು ಧೋರಣೆ ತಾಳಿರುವುದು ಪ್ರಯಾಣಿಕರು ಯಾವುದೇ ಕಿರಿಕಿರಿ ಇಲ್ಲದೇಓಡಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳಲ್ಲಿ 205 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 63 ಮಂದಿ ಪುರುಷರು, 6 ಮಂದಿ ಮಹಿಳೆಯರು, ಒಂದು ಮಗು ಮೃತಪಟ್ಟಿತ್ತು. ಇದರಲ್ಲಿ ಬಹುಪಾಲು ದ್ವಿಚಕ್ರ ವಾಹನ ಸವಾರರು. ಹೆಲ್ಮೆಟ್ ಧರಿಸದೆ ಅನೇಕರು ಮೃತಪಟ್ಟಿದ್ದರು. ಮಾರ್ಚ್‌ ತಿಂಗಳಿನಲ್ಲಿ 189 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 57 ಪುರುಷರು, 8 ಮಹಿಳೆಯರು, ನಾಲ್ಕು ಮಕ್ಕಳು ಮೃತಪಟ್ಟಿದ್ದರು. ಏಪ್ರಿಲ್‌ ತಿಂಗಳು ಸಂಪೂರ್ಣ ಲಾಕ್‌ಡೌನ್‌ ಇದ್ದು, ವಾಹನಗಳು ರಸ್ತೆಗೆ ಇಳಿಯದ ಕಾರಣ ಅಲ್ಲೊಂದು, ಇಲ್ಲೊಂದು ಅಪಘಾತ ಪ್ರಕರಣದಾಖಲಾಗಿದೆ.

ADVERTISEMENT

ಇದೀಗ ಲಾಕ್‌ಡೌನ್‌ ಸಡಿಲಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಅಪಘಾತ ಪ್ರಮಾಣ ಹೆಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿದ ನಂತರ ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದ ಪ್ರಮಾಣ ಕಡಿಮೆಯಾಗಿತ್ತು.

ಮಾಸ್ಕ್‌ ನೆಪ: ಇನ್ನೂ ಮಾಸ್ಕ್‌ಧರಿಸಿದರೆ ಹೆಲ್ಮೆಟ್‌ ಹಾಕಿಕೊಳ್ಳುವುದು ಕಷ್ಟವಾಗುತ್ತದೆ ಎನ್ನುವುದು ದ್ವಿಚಕ್ರ ವಾಹನ ಸವಾರರ ವಾದ. ಮಾಸ್ಕ್ ಜತೆಗೆ ಹೆಲ್ಮೆಟ್‌ ಹಾಕಿಕೊಳ್ಳುವುದರಿಂದ ಉಸಿರಾಟಕ್ಕೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಕೆಲವು ದಿನ ಹೆಲ್ಮೆಟ್‌ಧರಿಸದೆ ಪ್ರಯಾಣಿಸುವುದಕ್ಕೆ ಅವಕಾಶ ನೀಡಬೇಕು ಎನ್ನುತ್ತಾರೆ ಹಲವು ಪ್ರಯಾಣಿಕರು.

ಬೇಸಿಗೆಯಲ್ಲಿ ಕಿರಿಕಿರಿ: ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಹೆಲ್ಮೆಟ್‌ ಧರಿಸುವುದಕ್ಕೆ ಕಿರಿಕಿರಿಯಾಗುತ್ತದೆ. ಬೇಸಿಗೆಯಲ್ಲಿ ಹೆಲ್ಮೆಟ್‌ ಹಾಕಿಕೊಳ್ಳುವುದರಿಂದ ಉಷ್ಣಾಂಶ ಹೆಚ್ಚಾಗಿ ಚರ್ಮ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಬೇಸಿಗೆಯಲ್ಲಿ ಹೆಲ್ಮೆಟ್‌ನಿಂದ ವಿನಾಯಿತಿ ನೀಡಬೇಕು ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.