ADVERTISEMENT

ಪಾವಗಡ: ತುಂಗಭದ್ರಾ, ಭದ್ರಾ ಮೇಲ್ದಂಡೆ ಕಾಮಗಾರಿಗೆ ವೇಗ ನೀಡಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 16:03 IST
Last Updated 19 ಫೆಬ್ರುವರಿ 2024, 16:03 IST
ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿಗಳನ್ನು ಶೀಘ್ರ ಮುಗಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು
ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿಗಳನ್ನು ಶೀಘ್ರ ಮುಗಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು   

ಪಾವಗಡ: ‘ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ಯೋಜನೆ, ಕೆರೆಗಳಿಗೆ ನೀರು ಹರಿಸುವ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ಶೀಘ್ರ ಮುಗಿಸಿ ನೀರು ಹರಿಸಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸುವುದಾಗಿ ಕೇವಲ ಭರವಸೆ ನೀಡಲಾಗುತ್ತಿದೆ. ದಶಕ ಕಳೆದರು ಯಾವುದೇ ನೀರಾವರಿ ಯೋಜನೆಯಿಂದ ನೀರು ಹರಿಸುತ್ತಿಲ್ಲ. ಹಲ ವರ್ಷಗಳ ಹಿಂದೆ ತುಂಗಭದ್ರಾ ಯೋಜನೆಗಾಗಿ ₹2,350 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ವರ್ಷಗಳು ಕಳೆದರೂ ಕಾಮಗಾರಿ ಮುಕ್ತಾಯವಾಗಿಲ್ಲ. ಕುಡಿಯುವ ನೀರಿಗಾಗಿ ತಾಲ್ಲೂಕಿನ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ತಾಲ್ಲೂಕಿನ ಬಹುತೇಕ ಕೆರೆಗಳು ಹೂಳು ತುಂಬಿಕೊಂಡು ಕೆರೆಕಟ್ಟೆಗಳು ಶಿಥಿಲಾವಸ್ಥೆ ತಲುಪಿವೆ. ತೂಬುಗಳು ಹಾಳಾಗಿ ಮಳೆ ನೀರು ಕೆರೆಗೆ ಬಂದರೂ ನಿಲ್ಲದೆ ವ್ಯರ್ಥವಾಗಿ ಹೊರ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಿದರೂ ಕೆರೆಗಳಲ್ಲಿ ನೀರು ನಿಲ್ಲುವುದಿಲ್ಲ ಇದರಿಂದ ಸಾವಿರಾರು ಕೋಟಿ ಹಣ ವ್ಯರ್ಥವಾಗಲಿದೆ. ಹೀಗಾಗಿ ಆದ್ಯತೆ ಮೇರೆಗೆ ಕೆರೆಕಟ್ಟೆ, ತೂಬುಗಳನ್ನು ಸರಿಪಡಿಸಬೇಕು ಎಂದರು.

ADVERTISEMENT

ಬಗರ್ ಹುಕುಂ ಅರ್ಜಿಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು. ಜಮೀನುಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಓಡಾಡುವ ರೈತರು, ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳನ್ನು ಅಡ್ಡಿಪಡಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಇ–ಖಾತೆ ಮಾಡಿಕೊಡಲು ಸತಾಯಿಸದೆ ಶೀಘ್ರ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಭೋವಿ, ದಶಕಗಳಿಂದ ಬರದ ನಾಡಾಗಿರುವ ತಾಲ್ಲೂಕಿಗೆ ನೀರು ಹರಿಸುವಲ್ಲಿ ಸರ್ಕಾರ ವಿಫಲವಾಗಿವೆ. ತುಂಗಭದ್ರಾ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳ ಕಾಮಗಾರಿ ವೇಗ ಹೆಚ್ಚಿಸಿ ಬರದಿಂದ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದರು.

ಅಖಿಲ ಕರ್ನಾಟಕ ಯುವ ಘಟಕದ ಅಧ್ಯಕ್ಷೆ ಮಹದೇವಮ್ಮ, ಕಡಪಲಕೆರೆ ಬಳಿಯ ಸೋಲಾರ್ ಘಟಕದಲ್ಲಿ ರೈತ ಮಹಿಳೆ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ. ಪೊಲೀಸರು ಮಹಿಳೆಯೊಂದಿಗೆ ನಡೆದುಕೊಂಡಿರುವ ರೀತಿ ವಿಷಾದನೀಯ. ಕಾನೂನಿನ ಪ್ರಕಾರ ರೈತ ಮಹಿಳೆಗೆ ಸಿಗಬೇಕಿರುವ ಜಮೀನು ಕೊಡಿಸಿಕೊಡಬೇಕು. ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರೈತರ ವಿರುದ್ಧ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಶನೈಶ್ಚರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ಆರಂಭಿಸಲಾಯಿತು.

ರೈತ ಮುಖಂಡ ನರಸಪ್ಪ, ಈರಣ್ಣ, ಗಂಗಾಧರನಾಯ್ಡು, ರಾಮಾಂಜಿ, ಶಿವು, ನರಸಪ್ಪ, ಹನುಮಂತರಾಯಪ್ಪ, ಗೋವಿಂದಪ್ಪ, ಹನುಮಂತರಾಯ, ಕೃಷ್ಣಪ್ಪ, ನರಸಿಂಹಮೂರ್ತಿ, ಕೃಷ್ಣರಾವ್, ಸಿದ್ದಪ್ಪ, ರಾಮಾಂಜಪ್ಪ, ನಾಗರಾಜು, ಈರಣ್ಣ, ವೀರಭದ್ರಪ್ಪ, ಪಾತಣ್ಣ, ಸಿದ್ದಪ್ಪ, ಹನುಮಕ್ಕ, ಅಂಕಾಲಮ್ಮ, ನಡುಪಣ್ಣ, ಗುಡಿಪಲ್ಲಪ್ಪ, ದುರ್ಗಪ್ಪ, ಓಬಳಪ್ಪ, ರಾಮಲಿಂಗಪ್ಪ, ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.