ADVERTISEMENT

ತುರುವೇಕೆರೆ ಕ್ಷೇತ್ರ ನೋಟ: ಇದುವರೆಗೆ 17 ಶಾಸಕರಲ್ಲಿ 14 ಮಂದಿ ಒಕ್ಕಲಿಗರು!

ಗುಬ್ಬಿ ತಾಲ್ಲೂಕಿನ ಸಿ.ಎಸ್‍. ಪುರ, ಕಡಬಾ ಹೋಬಳಿಯ 2 ಗ್ರಾ.ಪಂ. ನಿರ್ಣಾಯಕ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 14:52 IST
Last Updated 13 ಮಾರ್ಚ್ 2023, 14:52 IST
ತುರುವೇಕೆರೆ ವಿಧಾನಸಭಾ ಕ್ಷೇತ್ರ
ತುರುವೇಕೆರೆ ವಿಧಾನಸಭಾ ಕ್ಷೇತ್ರ   

ತುರುವೇಕೆರೆ: ಗುಬ್ಬಿ ತಾಲ್ಲೂಕಿನ ಸಿ.ಎಸ್‍. ಪುರ ಹೋಬಳಿ ಮತ್ತು ಕಡಬಾ ಹೋಬಳಿಯ ಎರಡು ಗ್ರಾಮ ಪಂಚಾಯಿತಿಗಳನ್ನು ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿದ್ದು, ಚುನಾವಣೆ ವೇಳೆ ಸಿ.ಎಸ್‍. ಪುರ ಹೋಬಳಿ ಗಮನ ಸೆಳೆಯುತ್ತಲೇ ಬಂದಿದೆ. ಈ ಭಾಗದಲ್ಲಿ ಹೆಚ್ಚು ಮತ ಪಡೆದವರು ಆಯ್ಕೆಯಾಗುತ್ತಾ ಬಂದಿರುವುದು ವಿಶೇಷ.

2008ರಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆ ಸಮಯದಲ್ಲಿ ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿಯ ಪೆದ್ದನಹಳ್ಳಿ, ಕಲ್ಲೂರು ಪಂಚಾಯಿತಿ ಹಾಗೂ ಸಿ.ಎಸ್‍. ಪುರ ಹೋಬಳಿಯನ್ನು ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಕಾರಣಕ್ಕಾಗಿಯೇ ಈ ಎರಡು ಪ್ರದೇಶಗಳು ತುರುವೇಕೆರೆ, ಗುಬ್ಬಿ ತಾಲ್ಲೂಕು ಎರಡರಿಂದಲೂ ಹೆಚ್ಚಿನ ಅನುದಾನ ಪಡೆಯುತ್ತಿವೆ. ಜತೆಗೆ, ಈ ಬಾಗದ ಜನರು ತುರುವೇಕೆರೆ ಹೇಮಾವತಿ ನಾಲಾ ನೀರಿನಲ್ಲೂ ಸಿಂಹಪಾಲು ಕೇಳುತ್ತಿದ್ದಾರೆ.

ಸಿ.ಎಸ್‍. ಪುರ ಹೋಬಳಿ ಚುನಾವಣೆಗಳಲ್ಲಿ ಹಲವು ಕುತೂಹಲ ಮೂಡಿಸುತ್ತಾ ಬಂದಿದೆ. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಹೊಸದರಲ್ಲಿ ಕಾಂಗ್ರೆಸ್‍ನಿಂದ ಮೊದಲ ಬಾರಿಗೆ ಆನಡಗು ಗ್ರಾಮದ ಚಿತ್ರನಟ ಜಗ್ಗೇಶ್‍ ಸ್ಪರ್ಧಿಸಿ ಗೆಲುವು ಕಂಡಿದ್ದರು. ಕೇವಲ 40 ದಿನಗಳ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ADVERTISEMENT

ಉಪ ಚುನಾವಣೆಯಲ್ಲಿ ಬಿಜೆಪಿಯ ಎಂ.ಡಿ. ಲಕ್ಷ್ಮಿನಾರಾಯಣ್, ಜೆಡಿಎಸ್‍ನ ಎಂ.ಟಿ. ಕೃಷ್ಣಪ್ಪ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಇನ್ನೇನು ಬಿಜೆಪಿ ಅಭ್ಯರ್ಥಿ ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ ಸಿ.ಎಸ್. ಪುರ ಭಾಗದ ಮತಗಳು ಕೃಷ್ಣಪ್ಪ ಕೈ ಹಿಡಿದು ಗೆಲುವಿನ ದಡ ಸೇರಿಸಿದ್ದು ಇತಿಹಾಸ. ಆದರೆ, 2018ರಲ್ಲಿ ಮಾತ್ರ ತಮ್ಮದೇ ಹೋಬಳಿಯ ಅಂಕಳಸಂದ್ರದ ಬಿಜೆಪಿ ಅಭ್ಯರ್ಥಿ ಮಸಾಲ ಜಯರಾಮ್‍ ಬೆಂಬಲಿಸಿದ್ದರು.

ಒಕ್ಕಲಿಗರ ಬಿಗಿ ಹಿಡಿತ ಸಾಧಿಸಿರುವ ಸಿ.ಎಸ್‍. ಪುರ ಹೋಬಳಿ ಮೊದಲೇ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೊಂದಿರುವ ತುರುವೇಕೆರೆ ಕ್ಷೇತ್ರಕ್ಕೆ ಸೇರ್ಪಡೆಯಾಗುವ ಮೂಲಕ ‘ಒಕ್ಕಲಿಗರ ಬ್ರ್ಯಾಂಡ್‍’ ಕ್ಷೇತ್ರವಾಗಿದೆ. ಈವರೆಗೂ ಆಯ್ಕೆಯಾದ 17 ಶಾಸಕರ ಪೈಕಿ 14 ಒಕ್ಕಲಿಗ ನಾಯಕರಾಗಿದ್ದು ಟಿ. ಸುಭ್ರಮಣ್ಯಂ, ಎಂ.ಎನ್‍. ರಾಮಣ್ಣ ಅವರು ಬ್ರಾಹ್ಮಣ ಸಮುದಾಯದವರು. ಎಂ.ಡಿ. ಲಕ್ಷ್ಮಿನಾರಾಯಣ್ ಹಿಂದುಳಿದ ವರ್ಗಕ್ಕೆ ಸೇರಿದವರು.

1941-1949ರ ವರೆಗೆ ಮೈಸೂರು ಅರಸರ (ಜಯಚಾಮರಾಜೇಂದ್ರ ಒಡೆಯರ್) ಆಳ್ವಿಕೆಯಲ್ಲಿ ಬಾಣಸಂದ್ರದ ಬಿ. ಹುಚ್ಚೇಗೌಡ ಅವರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದರು. 1952ರಲ್ಲಿ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಕಸಬಾ, ಮಾಯಸಂದ್ರ, ದಂಡಿನಶಿವರ, ದಬ್ಬೇಘಟ್ಟ ಹೋಬಳಿಗಳು ತುರುವೇಕೆರೆ ಕ್ಷೇತ್ರದ ಭಾಗವಾಗಿದ್ದವು.

ಬಾಣಸಂದ್ರದ ಸೇರ್ವೇಗಾರ ಕುಟುಂಬದ ಬಿ. ಹುಚ್ಚೇಗೌಡ ಅವರು ಕಿಸಾನ್‍ ಮಜದೂರ್ ಪ್ರಜಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಕಾರಣಕರ್ತರಲ್ಲಿ ಒಬ್ಬರಾದ ತಾಳ್ಕೆರೆ ಗ್ರಾಮದ ಸುಭ್ರಮಣ್ಯಂ 1957ರಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾದರು.

1962ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಬಿ. ಹುಚ್ಚೇಗೌಡ ಎರಡನೇ ಬಾರಿಗೆ ಗೆಲುವು ಸಾಧಿಸಿದರು. ಆದರೆ, ಅವರು ಒಂದೇ ವರ್ಷದಲ್ಲಿ ಮರಣ ಹೊಂದಿದ್ದು, 1963ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಭೈತರಹೊಸಹಳ್ಳಿ ಬಿ. ಭೈರಪ್ಪಾಜಿ ಕಾಂಗ್ರೆಸ್‍ನಿಂದ ಆಯ್ಕೆಯಾದರು.

1967ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಮಾಯಸಂದ್ರದ ರಾಮಣ್ಣ ಗೆಲುವು ಸಾಧಿಸಿದ್ದರು. 1972ರಲ್ಲಿ ಕಾಂಗ್ರೆಸ್‍ನಿಂದ ಬಿ. ಭೈರಪ್ಪಾಜಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. 1978ರಲ್ಲಿ ಇಂದಿರಾ ಕಾಂಗ್ರೆಸ್‍ನಿಂದ ಕೊಳಾಲದ ಕೆ.ಎಚ್‍. ರಾಮಕೃಷ್ಣಯ್ಯ ವಿಜಯ ಸಾಧಿಸಿದ್ದರು. 1983ರಲ್ಲಿ ಕಾಂಗ್ರೆಸ್‍ನಿಂದ ಬಿ. ಭೈರಪ್ಪಾಜಿ ಮೂರನೇ ಬಾರಿಗೆ ಆಯ್ಕೆಯಾದರು. 1985ರಲ್ಲಿ ಕಾಂಗ್ರೆಸ್ ಬಿಟ್ಟು ಜನತಾ ಪಕ್ಷದಿಂದ ಸ್ಪರ್ಧಿಸಿದ ಕೆ.ಎಚ್‍. ರಾಮಕೃಷ್ಣಯ್ಯ ಗೆಲುವು ಕಂಡಿದ್ದರು. 1989ರಲ್ಲಿ ಕಾಂಗ್ರೆಸ್‌ನ ಎಸ್‍. ರುದ್ರಪ್ಪ ಆಯ್ಕೆಯಾದರು.

1994ರಲ್ಲಿ ಜನತಾ ದಳದಿಂದ ಹೊಡಕೆಘಟ್ಟದ ಎಚ್‍.ಬಿ. ನಂಜೇಗೌಡ, 1999ರಲ್ಲಿ ಬಿಜೆಪಿಯಿಂದ ಮುನಿಯೂರಿನ ಎಂ.ಡಿ. ಲಕ್ಷ್ಮಿನಾರಾಯಣ್, 2004ರಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮುತ್ಸಂದ್ರದ ಎಂ.ಟಿ. ಕೃಷ್ಣಪ್ಪ ಆಯ್ಕೆಯಾದರು. ಈ ಮೂವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ಇತಿಹಾಸ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ನಂತರ ಕಾಂಗ್ರೆಸ್‍ನಿಂದ ನಟ ಜಗ್ಗೇಶ್‍ ಆಯ್ಕೆಯಾದರೂ ಆಪರೇಷನ್ ಕಮಲದಿಂದಾಗಿ ಒಂದೇ ತಿಂಗಳಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡರು. ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪ ಜೆಡಿಎಸ್‍ನಿಂದ ಗೆದ್ದರು. 2013ರಲ್ಲಿ ಜೆಡಿಎಸ್‍ನ ಎಂ.ಟಿ. ಕೃಷ್ಣಪ್ಪ ಮೂರನೇ ಬಾರಿಗೆ ಆಯ್ಕೆಯಾದರು. 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅಂಕಳಸಂದ್ರದ ಮಸಾಲ ಜಯರಾಮ್‍ ಮೊದಲ ಬಾರಿಗೆ ಶಾಸಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.