ADVERTISEMENT

ಜಾನಪದ ಅಕಾಡೆಮಿ ಪ್ರಶಸ್ತಿ: ಚಿಕ್ಕಣ್ಣ ಯಣ್ಣೆಕಟ್ಟೆ, ರೇವಣ್ಣಗೆ ಗೌರವ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:34 IST
Last Updated 24 ಡಿಸೆಂಬರ್ 2025, 7:34 IST
ಚಿಕ್ಕಣ್ಣ ಯಣ್ಣೆಕಟ್ಟೆ
ಚಿಕ್ಕಣ್ಣ ಯಣ್ಣೆಕಟ್ಟೆ   

ತುಮಕೂರು: ಪ್ರಸಕ್ತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಕಲಾವಿದರು ಭಾಜನರಾಗಿದ್ದಾರೆ.

ಜಾನಪದ ವಿದ್ವಾಂಸ ಚಿಕ್ಕಣ್ಣ ಯಣ್ಣೆಕಟ್ಟೆ ಅವರು ‘ಡಾ.ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿ’, ಅಲಗು ಕುಣಿತ ಕಲಾವಿದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಾಸಲು ಗೊಲ್ಲರಹಟ್ಟಿಯ ರೇವಣ್ಣ ಅವರಿಗೆ ವಾರ್ಷಿಕ ಗೌರವ ಪ್ರಶಸ್ತಿ ಸಂದಿದೆ.

ಬಹುಮುಖ ಪ್ರತಿಭೆ ಚಿಕ್ಕಣ್ಣ

ADVERTISEMENT

ಚಿಕ್ಕಣ್ಣ ಅವರು ಗುಬ್ಬಿ ತಾಲ್ಲೂಕಿನ ಯಣ್ಣೆಕಟ್ಟೆ ಗ್ರಾಮದವರು. ಬೆಂಗಳೂರಿನ ಎಸ್‌ಜೆಆರ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ರಾಜ್ಯದ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ವೃತ್ತಿಯ ಜತೆಗೆ ಜಾನಪದ ಕಲೆ, ಸೊಗಡು, ಚರಿತ್ರೆ ಕುರಿತು 85ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಕಲೆ, ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. 1988ರಲ್ಲಿ ಶಿರಾದಲ್ಲಿ ‘ಗಡಿನಾಡ ಜಾನಪದ ಸಂಪರ್ಕ ಅಧ್ಯಯನ ಕೇಂದ್ರ’ ಆರಂಭಿಸಿದ್ದಾರೆ. ಚಿಕ್ಕಣ್ಣ ಅವರ ‘ಬಂಡಿ ಬಂದಾವು ಬಾಳೆ ವನದಾಗೆ’ ಕೃತಿಗೆ ಜಾನಪದ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ. ‘ವೀರಜುಂಜಪ್ಪ ಸಮಗ್ರ ಕಥಾವಳಿ’ ಕೃತಿ ಹಲವು ವಿಶ್ವವಿದ್ಯಾಲಯಗಳಲ್ಲಿ ಕೃತಿ, ಪರಾಮರ್ಶನ ಗ್ರಂಥವಾಗಿದೆ. ಇವರ ಅನೇಕ ಕೃತಿಗಳು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯದ ಭಾಗವಾಗಿವೆ.

‘ಹೊಳೆದಂಡೆ ಕರಿಕೆ’, ‘ಕಿನ್ನರಿಯ ಮೇಲೆ ಕಿರುಗೆಜ್ಜೆ’, ‘ಗಡಿನಾಡು ಜಾನಪದ’, ‘ತುಮಕೂರು ಜಿಲ್ಲೆ: ಜಾನಪದ ಅಧ್ಯಯನ’, ‘ತುಮಕೂರು ಜಿಲ್ಲೆ: ಬುಡಕಟ್ಟು ಜನಾಂಗ ಮತ್ತು ಸಂಸ್ಕೃತಿ’ ಇವರ ಪ್ರಮುಖ ಕೃತಿಗಳು. ಜಿಲ್ಲೆಯ ಗಡಿಭಾಗದ ಜಾನಪದ ಕಲೆ, ಸಂಸ್ಕೃತಿಗೆ ಬರಹದ ರೂಪ ಕೊಟ್ಟು ಕಲೆಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.

ಅಲಗು ಕುಣಿತದ ರೇವಣ್ಣ

ಕಾಡುಗೊಲ್ಲರ ಕಲೆಗೆ ಗೌರವ: ಜಿಲ್ಲೆಯ ವಿಶೇಷ ಕಲೆ, ಅಳಿವಿನ ಅಂಚಿಗೆ ಸರಿದ ‘ಅಲಗು ಕುಣಿತ’ಕ್ಕೆ ಈ ಬಾರಿಯ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಸಂದಿದೆ. ಬುಡಕಟ್ಟು ಸಂಸ್ಕೃತಿಯ ಉಳಿವಿಗೆ ದುಡಿಯುತ್ತಿರುವ ರೇವಣ್ಣ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರೇವಣ್ಣ ಕುಟುಂಬದ ಮೂರು ತಲೆಮಾರಿನ ಜನ ಅಲಗು ಕುಣಿತವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ.

ಕಾಡುಗೊಲ್ಲ ಸಮುದಾಯದ ಪ್ರಮುಖ ನೃತ್ಯ ಅಲಗು ಕುಣಿತ. ರೇವಣ್ಣ ತಮ್ಮ ತಾತ, ತಂದೆಯಿಂದ ಅಲಗು ಕುಣಿತ ಕಲಿತು ತಮ್ಮ ಮಕ್ಕಳಿಗೂ ಕಲಿಸುತ್ತಿದ್ದಾರೆ. ಬಾಲ್ಯದಲ್ಲಿಯೇ ಕಲೆಯ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದರು. ಹಲವು ವರ್ಷಗಳಿಂದ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಲೆ ಪ್ರದರ್ಶಿಸಿ ಗಮನ ಸೆಳೆಯುತ್ತಿದ್ದಾರೆ.

‘ಎಲ್ಲೆಡೆ ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ಈಗಿನ ತಲೆಮಾರಿನ ಮಕ್ಕಳು ಮೊಬೈಲ್‌, ಟಿ.ವಿ ಪರದೆಗೆ ಆಕರ್ಷಿತರಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಕಲೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳಿಗೂ ಜಾನಪದ ಕಲೆ, ಸಂಸ್ಕೃತಿ, ಪರಂಪರೆ ಕುರಿತು ಅರಿವು ಮೂಡಿಸಬೇಕಿದೆ’ ಎನ್ನುತ್ತಾರೆ ರೇವಣ್ಣ.

ರೇವಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.