ADVERTISEMENT

ಇಬ್ಬರು ಕಾನ್‌ಸ್ಟೆಬಲ್ ಅಮಾನತು

3 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:45 IST
Last Updated 4 ಜೂನ್ 2021, 2:45 IST

ತುಮಕೂರು: ಇಸ್ಪೀಟ್ ದಂಧೆ ನಿಯಂತ್ರಿಸುವಲ್ಲಿ ಕರ್ತವ್ಯ ಲೋಪ ತೋರಿದ ಆರೋಪದ ಮೇಲೆ ಗುಬ್ಬಿ ಪೊಲೀಸ್ ಠಾಣೆ ಕಾನ್‌ಸ್ಟೆಬಲ್‌ಗಳಾದ ಸಿದ್ದೇಗೌಡ, ಮಲ್ಲೇಶ್ ಅವರನ್ನು ಅಮಾನತು ಮಾಡಲಾಗಿದೆ.

ಕೋವಿಡ್ ಸಮಯದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಇಸ್ಪೀಟ್ ದಂಧೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಸ್ಪಂದಿಸಿರಲಿಲ್ಲ. ಜತೆಗೆ ದಂಧೆಯಲ್ಲಿ ತೊಡಗಿದವರಿಗೆ ಪೊಲೀಸರೇ ಮಾಹಿತಿ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಬಗ್ಗೆ ತನಿಖೆ ನಡೆಸಲು ಶಿರಾ ಗ್ರಾಮಾಂತರ ವಿಭಾಗದ ಡಿವೈಎಸ್‌ಪಿ ಕುಮಾರಪ್ಪ ಅವರಿಗೆ ಸೂಚಿಸಲಾಗಿತ್ತು. ತನಿಖೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಅಮಾನತು ಮಾಡಲಾಗಿದೆ.

ADVERTISEMENT

ಜಿಲ್ಲಾ ಅಪರಾಧ ಪತ್ತೆ ದಳದ ಸರ್ಕಲ್ ಇನ್‌ಸ್ಪೆಕ್ಟರ್ ಶೇಷಾದ್ರಿ, ಗುಬ್ಬಿ ಠಾಣೆ ಹಿಂದಿನ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಬ್‌ಇನ್‌ಸ್ಪೆಕ್ಟರ್ ಜ್ಞಾನಮೂರ್ತಿ ಅವರು ಸಹ ದಂಧೆ ನಡೆಸಲು ಪರೋಕ್ಷವಾಗಿ ಕಾರಣಕರ್ತರಾಗಿದ್ದಾರೆ. ದಾಳಿ ನಡೆಸಿದ ಸಮಯದಲ್ಲಿ ವಶಪಡಿಸಿಕೊಂಡ ಹಣ, ವಸ್ತುಗಳ ವಿವರಗಳನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ಹಾಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ವರದಿ ಸಲ್ಲಿಸಿದ್ದರು. ಆದರೆ ಅವರ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

‘ಮೂವರು ಅಧಿಕಾರಿಗಳ ವಿರುದ್ಧ ವರದಿ ಬಂದಿದೆ. ಇನ್ನೂ ತನಿಖೆ ನಡೆಸಿಲ್ಲ. ಪ್ರಾಥಮಿಕ ತನಿಖೆ ನಡೆಸಿ, ಆರೋಪಗಳು ನಿಜವಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ವಂಶಿಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.