ADVERTISEMENT

ಗ್ರಾಮ ಆಡಳಿತಾಧಿಕಾರಿ ಹುದ್ದೆ ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಲೋಪ

ಆಯ್ಕೆ ಪಟ್ಟಿಯಲ್ಲಿ ಅಕ್ರಮ: ಸ್ಪರ್ಧಾರ್ಥಿಗಳು ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 23:32 IST
Last Updated 22 ಡಿಸೆಂಬರ್ 2024, 23:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಪ್ರಕಟಿಸಿದ 1:3 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಲೋಪವಾಗಿದ್ದು, ಅಕ್ರಮ ನಡೆದಿದೆ’ ಎಂದು ಸ್ಪರ್ಧಾರ್ಥಿಗಳು ಆರೋಪಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅ.26 ಮತ್ತು 27ರಂದು 1 ಸಾವಿರ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಡಿ.20ರಂದು ಕೆಇಎ ಮೆರಿಟ್‌ ಪಟ್ಟಿ ಪ್ರಕಟಿಸಿ ಪ್ರತಿ ಜಿಲ್ಲೆಗೆ ಪಟ್ಟಿ ಕಳುಹಿಸಿದೆ. ಜಿಲ್ಲಾ ಆಡಳಿತ ಡಿ.21ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ. ಜಾತಿವಾರು ವಿಂಗಡಿಸಿ ಪಟ್ಟಿ ಬಿಡುಗಡೆಗೊಳಿಸಿ ದಾಖಲಾತಿ ಪರಿಶೀಲನೆಗೆ ಕ್ರಮಕೈಗೊಂಡಿದೆ.

‘ಕೆಇಎ ಬಿಡುಗಡೆ ಮಾಡಿದ ಮೆರಿಟ್‌ ಪಟ್ಟಿಗೂ ಜಿಲ್ಲಾ ಆಡಳಿತ ಪ್ರಕಟಿಸಿದ ಪಟ್ಟಿಗೂ ತುಂಬಾ ವ್ಯತ್ಯಾಸವಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಅಭ್ಯರ್ಥಿಗಳ 40 ರಿಂದ 70 ಅಂಕಗಳು ಹೆಚ್ಚು–ಕಡಿಮೆಯಾಗಿವೆ. ಇದರಿಂದ ಶ್ರಮಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ನೇಮಕಾತಿ ಅಕ್ರಮಕ್ಕೆ ಮುಂದಾಗಿದ್ದಾರೆ. ಕೂಡಲೇ ಸೂಕ್ತ ಕ್ರಮಕೈಗೊಂಡು ಸಮಸ್ಯೆ ಸರಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಅಂಕಪಟ್ಟಿಯಲ್ಲಿ ಸಂಪೂರ್ಣವಾಗಿ ವ್ಯತ್ಯಾಸವಾಗಿದೆ. ನಗರ ಮತ್ತು ಗ್ರಾಮೀಣ ಅಭ್ಯರ್ಥಿ, ಮೀಸಲಾತಿವಾರು ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ ನಡೆದಿದೆ. ಮಹಿಳಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಪುರುಷರ ಹೆಸರು ಸೇರಿಸಲಾಗಿದೆ. ಅಂತಿಮ ಪಟ್ಟಿಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಉಲ್ಲೇಖಿಸಬೇಕು. ಇಲ್ಲದಿದ್ದರೆ ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪಟ್ಟಿ ತಿದ್ದುಪಡಿ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಪರೀಕ್ಷೆಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಓದಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದವರಿಗೆ ಜಿಲ್ಲಾ ಆಡಳಿತದ ಪಟ್ಟಿಯಿಂದ ಆಘಾತ ಉಂಟಾಗಿದೆ. ತಕ್ಷಣಕ್ಕೆ ಲೋಪ ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಅಭ್ಯರ್ಥಿಯೊಬ್ಬರು ಮನವಿ ಮಾಡಿದರು.

‘ತಾಂತ್ರಿಕ ಸಮಸ್ಯೆಯಿಂದ ವ್ಯತ್ಯಾಸ ಆಗಿದೆಯೋ, ಬೇರೆ ಏನಾದರೂ ತೊಂದರೆಯಿಂದ ಈ ರೀತಿ ನಡೆದಿದೆಯೋ ಎಂಬುವುದನ್ನು ಪತ್ತೆ ಹಚ್ಚಬೇಕು’ ಎಂದು ಅಭ್ಯರ್ಥಿ ಶ್ರೀನಿವಾಸ್‌ ಒತ್ತಾಯಿಸಿದರು.

ಈ ಹಿಂದಿನ ವರ್ಷಗಳಲ್ಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿತ್ತು. ಜಿಲ್ಲೆಯ 73 ಹುದ್ದೆಗಳಿಗೆ ಪರೀಕ್ಷೆ ಬರೆಯಲು 25,216 ಮಂದಿ ನೋಂದಣಿ ಮಾಡಿಕೊಂಡಿದ್ದರು.

ತಾತ್ಕಾಲಿಕ ಪಟ್ಟಿ ವಾಪಸ್‌

ಹಲವು ಗೊಂದಲಗಳಿಗೆ ಕಾರಣವಾಗಿದ್ದ ಪಟ್ಟಿಯನ್ನು ಜಿಲ್ಲಾ ಆಡಳಿತ ರಾತ್ರೋರಾತ್ರಿ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಹಿಂಪಡೆದಿದೆ. ಸ್ಪರ್ಧಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾ ಆಡಳಿತ ಪಟ್ಟಿ ವಾಪಸ್‌ ಪಡೆದಿದೆ. ‘ತಾಂತ್ರಿಕ ಕಾರಣದಿಂದ 1:3 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಹಿಂಪಡೆಯಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.