ADVERTISEMENT

ತುಮಕೂರು: 22ಕ್ಕೆ ವಾಲ್ಮೀಕಿ ಸಮುದಾಯ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:04 IST
Last Updated 16 ಜುಲೈ 2024, 4:04 IST
ಚಳವಳಿ ಪಿ.ರಾಜಣ್ಣ
ಚಳವಳಿ ಪಿ.ರಾಜಣ್ಣ   

ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ವಾಲ್ಮೀಕಿ ಸ್ವಾಭಿಮಾನಿ ಸಂಘದಿಂದ (ವಿಎಸ್ಎಸ್) ಜುಲೈ 22ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.

‘ಅಭಿವೃದ್ಧಿ ನಿಗಮದಲ್ಲಿ ಹಗಲು ದರೋಡೆ ನಡೆದಿದೆ. ಕೋಟ್ಯಂತರ ರೂಪಾಯಿ ಸಮುದಾಯದ ಹಣ ಲೂಟಿ ಹೊಡೆದಿದ್ದಾರೆ. ಬಡವರ ಬದುಕಿಗೆ ಹಳ್ಳ ತೋಡಿದ್ದಾರೆ. ಮೊಳೆ ಹೊಡೆದಿದ್ದಾರೆ. ಇದರಲ್ಲಿ ಸರ್ಕಾರದ ಪಾಲು ಇದೆ. ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ವಹಿಸಬೇಕಿತ್ತು’ ಎಂದು ವಿಎಸ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ಚಳವಳಿ ಪಿ.ರಾಜಣ್ಣ ಇಲ್ಲಿ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಕಳೆದ ಎರಡು ವರ್ಷಗಳ ಕಾಲ ಯಾವುದೇ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಪರಿಶಿಷ್ಟರಿಗೆ ಸರ್ಕಾರ, ಮಂತ್ರಿ, ಅಧಿಕಾರಿಗಳಿಂದ ಮೋಸ ಆಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವರು ಹಗರಣದ ಹೊಣೆ ಹೊರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಹೋರಾಟ ನಡೆಸುತ್ತವೆ. ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಪರಿಶಿಷ್ಟರ ಹಣ ಗ್ಯಾರಂಟಿಗಳಿಗೆ ಬಳಸಿರುವುದು ನೀಚ ಆಡಳಿತದ ಪರಮಾವಧಿ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಜನಪರ ಕೆಲಸ ಮಾಡುತ್ತಿಲ್ಲ. ತಳ ಸಮುದಾಯಗಳ ಅಭಿವೃದ್ಧಿ ಮರೆತಿದ್ದಾರೆ. ವಾಲ್ಮೀಕಿ ಸಮುದಾಯದ ಜನಪ್ರತಿನಿಧಿಗಳು ತಮ್ಮ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಅವರು ವಾಲ್ಮೀಕಿ ವಿಚಾರ, ಆದರ್ಶ ಮೈಗೂಡಿಸಿಕೊಂಡಿದ್ದರೆ ನಮ್ಮ ಬದುಕು ಹೀಗೆ ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.

ವಿಎಸ್‌ಎಸ್‌ ಪದಾಧಿಕಾರಿಗಳಾದ ಕುಪ್ಪೂರು ಶ್ರೀಧರ್, ಶಿವರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.