ADVERTISEMENT

ತರಕಾರಿ, ಹಣ್ಣು, ಅಡುಗೆ ಎಣ್ಣೆ ದುಬಾರಿ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:02 IST
Last Updated 30 ಮೇ 2021, 3:02 IST
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು   

ತುಮಕೂರು: ಕಳೆದ ಎರಡು ವಾರದಿಂದ ಏರಿಕೆ ಮುಂದುವರಿಸಿರುವ ತರಕಾರಿ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಸೊಪ್ಪು ಮತ್ತಷ್ಟು ದುಬಾರಿಯಾಗಿದೆ. ಹಣ್ಣಿನ ಬೆಲೆಯೂ ಗಗನಮುಖಿಯಾಗಿದೆ.

ಲಾಕ್‌ಡೌನ್ ಸಮಯದಲ್ಲಿ ಹಣ್ಣು, ತರಕಾರಿ, ಸೊಪ್ಪು ದುಬಾರಿಯಾಗಿರುವುದು ಮಧ್ಯಮ, ಬಡ ವರ್ಗದ ಜನರನ್ನು ಹೈರಾಣಾಗಿಸಿದೆ. ಪ್ರತಿ ವಾರವೂ ಹೆಚ್ಚಳವಾಗುತ್ತಿರುವುದು ಕಂಡು ಜೀವನ ನಡೆಸಲು ಪರದಾಡುತ್ತಿದ್ದಾರೆ.

ಕೊತ್ತಂಬರಿ ಸೊಪ್ಪು ಕೆ.ಜಿ ₹80, ಸಬ್ಬಕ್ಕಿ ಕೆ.ಜಿ ₹80, ಮೆಂತ್ಯ ಸೊಪ್ಪು ಕೆ.ಜಿ ₹50, ಪಾಲಕ್ ಕೆ.ಜಿ ₹25ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ತರಕಾರಿ ಬೆಲೆಯೂ ಏರುಗತಿಯಲ್ಲಿ ಸಾಗಿದೆ. ಬೀನ್ಸ್, ಕ್ಯಾರೇಟ್, ಬೆಂಡೆಕಾಯಿ, ಆಲೂಗಡ್ಡೆ, ಬದನೆಕಾಯಿ ಸೇರಿದಂತೆ ಬಹುತೇಕ ತರಕಾರಿಗಳು ದುಬಾರಿಯಾಗಿವೆ. ಚಿಲ್ಲರೆಯಾಗಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ADVERTISEMENT

ಹಣ್ಣುಗಳ ಧಾರಣೆಯೂ ಹೆಚ್ಚಳವಾಗಿದ್ದು, ಸೇಬು, ದಾಳಿಂಬೆ ಕೆ.ಜಿ ₹200ರ ಗಡಿ ದಾಟಿವೆ. ಮೂಸಂಬಿ ಧಾರಣೆ ಸೇಬಿನ ಬೆಲೆಗೆ ಸಮೀಪ ಬಂದಿದೆ. ಕಿತ್ತಳೆ ಹಣ್ಣಿನ ಬೆಲೆ ಕಡಿಮೆಯಾಗುತ್ತಿಲ್ಲ. ಪಪ್ಪಾಯ ಕೆ.ಜಿ ₹40ಕ್ಕೆ ಏರಿಕೆಯಾಗಿದ್ದು, ಕೋವಿಡ್‌ಗೆ ಈ ಹಣ್ಣು ಹೆಚ್ಚಾಗಿ ಸೇವಿಸುವುದರಿಂದ ಬೆಲೆ ಹೆಚ್ಚಳವಾಗುತ್ತಿದೆ. ಆದರೆ ಕಳೆದ ಒಂದು ತಿಂಗಳಿಂದ ದುಬಾರಿಯಾಗಿದ್ದ ಪೈನಾಪಲ್ ಬೆಲೆ ಒಮ್ಮೆಲೆ ಕುಸಿತ ಕಂಡಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಬೆಲೆಯೂ ಆಕಾಶದತ್ತಲೇ ಮುಖಮಾಡಿದೆ. ಸನ್‌ಫ್ಲವರ್ ಲೀಟರ್ ₹165, ಪಾಮಾಯಿಲ್ ಲೀಟರ್ ₹135ರಲ್ಲೇ ಸ್ಥಿರವಾಗಿದೆ. ಬೇಳೆ, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕೋಳಿ ದುಬಾರಿ: ಕೋಳಿ ಬೆಲೆ ಅಲ್ಪ ಹೆಚ್ಚಳ ಕಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ.ಗೆ ₹10 ಏರಿಕೆಯಾಗಿದ್ದು, ಕೆ.ಜಿ ₹130ಕ್ಕೆ, ರೆಡಿ ಚಿಕನ್ ಕೆ.ಜಿ ₹180, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.