ADVERTISEMENT

ಮಾರುಕಟ್ಟೆ ವಿಶ್ಲೇಷಣೆ: ಹಸಿರು ಮೆಣಸಿನಕಾಯಿ ಬಲು ಖಾರ

ತರಕಾರಿ, ಸೊಪ್ಪು ಇಳಿಕೆ; ಹಣ್ಣು, ಕೋಳಿ, ಮೀನು ದುಬಾರಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 7:26 IST
Last Updated 20 ಜುಲೈ 2025, 7:26 IST
ಹಸಿರು ಮೆಣಸಿನಕಾಯಿ
ಹಸಿರು ಮೆಣಸಿನಕಾಯಿ   

ತುಮಕೂರು: ಎರಡು ವಾರದಿಂದ ಇಳಿಕೆಯತ್ತ ಸಾಗಿರುವ ತರಕಾರಿ, ಸೊಪ್ಪು ಬೆಲೆ ಈಗ ಮತ್ತಷ್ಟು ಅಗ್ಗವಾಗಿದೆ. ಹಸಿರು ಮೆಣಸಿನಕಾಯಿ ಶತಕದತ್ತ ಹೆಜ್ಜೆ ಹಾಕಿದೆ. ಶ್ರಾವಣ ಮಾಸ ಆರಂಭಕ್ಕೆ ಮುನ್ನವೇ ಹಣ್ಣು ದುಬಾರಿಯಾಗಿದೆ. ಬೇಳೆ, ಧಾನ್ಯಗಳು ತುಸು ತಗ್ಗಿದ್ದರೆ, ಕೋಳಿ ಮಾಂಸ, ಮೀನು ಗಗನಮುಖಿಯಾಗಿದೆ.

ಹಸಿರು ಮೆಣಸಿನಕಾಯಿ ದರ ಈ ವರ್ಷದ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕೆ.ಜಿ ₹70–80ಕ್ಕೆ ತಲುಪಿದೆ. ಚಿಲ್ಲರೆಯಾಗಿ ₹100ರ ವರೆಗೂ ಮಾರಾಟವಾಗುತ್ತಿದೆ. ಕ್ಯಾಪ್ಸಿಕಂ ಸಹ ಇದೇ ದಾರಿಯಲ್ಲಿ ಸಾಗಿದೆ. ಬೀನ್ ₹100ರ ಗಡಿಯಿಂದ ಇಳಿಯುತ್ತಲೇ ಬಂದಿದ್ದು, ಈಗ ಕೆ.ಜಿ ₹30–40ಕ್ಕೆ ಕುಸಿದಿದೆ. ಬೀಟ್ರೂಟ್, ಹೂಕೋಸು, ಮೂಲಂಗಿ, ನುಗ್ಗೆಕಾಯಿ, ಟೊಮೆಟೊ ಮತ್ತಷ್ಟು ಅಗ್ಗವಾಗಿದೆ. ಹಾಗಲಕಾಯಿ, ಬೆಳ್ಳುಳ್ಳಿ ಕೊಂಚ ಹೆಚ್ಚಳವಾಗಿದೆ. ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಸೊಪ್ಪು ಮತ್ತಷ್ಟು ಅಗ್ಗ: ಇಳಿಕೆಯತ್ತ ಮುಖ ಮಾಡಿದ್ದ ಸೊಪ್ಪು, ಈಗ ಮತ್ತಷ್ಟು ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹20–40, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹20ಕ್ಕೆ ಇಳಿಕೆಯಾಗಿದೆ.

ADVERTISEMENT

ಹಣ್ಣು ದುಬಾರಿ: ಶ್ರಾವಣ ಮಾಸ ಆರಂಭಕ್ಕೆ ಮುನ್ನವೇ ಹಣ್ಣು ಬದು ದುಬಾರಿಯಾಗಿದೆ. ಏಲಕ್ಕಿ ಬಾಳೆಹಣ್ಣು ಗಗನಮುಖಿಯಾಗಿದ್ದು, ಸೇಬು, ಕಿತ್ತಳೆ, ಪೈನಾಪಲ್, ದ್ರಾಕ್ಷಿ ಧಾರಣೆ ಹೆಚ್ಚಳವಾಗಿದೆ. ದಾಳಿಂಬೆ ಅಲ್ಪ ಕಡಿಮೆಯಾಗಿದೆ. ಶ್ರಾವಣದ ಹೊತ್ತಿಗೆ ಇನ್ನೂ ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.

ಅಡುಗೆ ಎಣ್ಣೆ ಇಳಿಕೆ: ಪಾಮಾಯಿಲ್, ಗೋಲ್ಡ್‌ವಿನ್ನರ್ ದರ ತುಸು ಇಳಿಕೆಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹140–145, ಪಾಮಾಯಿಲ್ ಕೆ.ಜಿ ₹112–114, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಬೇಳೆ ಧಾನ್ಯ: ಬೇಳೆ, ಧಾನ್ಯಗಳ ಧಾರಣೆ ಕೊಂಚ ತಗ್ಗಿದ್ದು, ತೊಗರಿ ಬೇಳೆ, ಕಡಲೆ ಕಾಳು, ಅಲಸಂದೆ, ಅವರೆಕಾಳು, ಗೋಧಿ ಕಡಿಮೆಯಾಗಿದೆ. ಕಡಲೆ ಬೇಳೆ, ಹುರಿಗಡಲೆ ತುಸು ಏರಿಕೆಯಾಗಿದೆ.

ಮಸಾಲೆ ಪದಾರ್ಥ: ಮೆಣಸಿನಕಾಯಿ, ಚಕ್ಕೆ, ಲವಂಗ, ಗಸಗಸೆ, ಏಲಕ್ಕಿ ತುಸು ಅಗ್ಗವಾಗಿದ್ದರೆ, ಮೆಣಸು ಏರಿಕೆಯಾಗಿದೆ. ದುಬಾರಿಯಾಗಿರುವ ಒಣ ಹಣ್ಣುಗಳ ಧಾರಣೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ.

ದನಿಯ ಕೆ.ಜಿ ₹110–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–180, ಹುಣಸೆಹಣ್ಣು ₹140–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹740–760, ಜೀರಿಗೆ ಕೆ.ಜಿ ₹240–250, ಚಕ್ಕೆ ಕೆ.ಜಿ ₹240–250, ಲವಂಗ ಕೆ.ಜಿ ₹800–840, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,600, ಏಲಕ್ಕಿ ಕೆ.ಜಿ ₹3,100–3,300, ಬಾದಾಮಿ ಕೆ.ಜಿ ₹780–800, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹480–500ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ: ಕೋಳಿ ಮಾಂಸದ ಬೆಲೆ ಮತ್ತೆ ಏರಿಕೆಯಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಹೆಚ್ಚಳವಾಗಿದೆ.

ಮೀನು ದುಬಾರಿ: ಮೀನು ಇನ್ನಷ್ಟು ದುಬಾರಿಯಾಗಿದೆ. ಬಂಗುಡೆ ಕೆ.ಜಿ ₹460, ಬೂತಾಯಿ ₹410, ಬೊಳಿಂಜರ್ ₹250, ಅಂಜಲ್ ಕೆ.ಜಿ ₹1,380, ಬಿಳಿಮಾಂಜಿ ಕೆ.ಜಿ 1,320, ಕಪ್ಪುಮಾಂಜಿ ₹1,000, ಇಂಡಿಯನ್ ಸಾಲ್ಮನ್ ₹1,100, ಸೀಗಡಿ ಕೆ.ಜಿ ₹510–720, ಏಡಿ ಕೆ.ಜಿ ₹770ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.