ADVERTISEMENT

ತುಮಕೂರು: ಸೊಪ್ಪು ಮತ್ತಷ್ಟು ಅಗ್ಗ; ಬೀನ್ಸ್ ಏರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 6:48 IST
Last Updated 9 ಜನವರಿ 2022, 6:48 IST
ಬೀನ್ಸ್‌
ಬೀನ್ಸ್‌   

ತುಮಕೂರು: ಸೊಪ್ಪಿನ ಬೆಲೆ ತೀವ್ರವಾಗಿ ಇಳಿಕೆ ಕಂಡಿದ್ದರೆ, ತರಕಾರಿ ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬೀನ್ಸ್ ದುಬಾರಿಯಾಗಿದೆ. ಟೊಮೆಟೊ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಹಣ್ಣು, ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಅವರೆಕಾಯಿ ಸೀಸನ್ ಆರಂಭವಾಗಿದ್ದರೂ ದುಬಾರಿ ಬೆಲೆಯಿಂದಾಗಿ ಜನರು ಅದರ ರುಚಿ ನೋಡಲು ಸಾಧ್ಯವಾಗುತ್ತಿಲ್ಲ. ಕಳೆದ ವಾರ ಕೆ.ಜಿ ₹50– 60ಕ್ಕೆ ಮಾರಾಟವಾಗಿದ್ದರೆ, ಈ ವಾರ ₹40– 50ಕ್ಕೆ ಇಳಿದಿದೆ ಎಂಬುದೇ ಸಮಾಧಾನಕರ ಸಂಗತಿ. ಈ ಸಮಯದಲ್ಲಿ ಅವರೆಕಾಯಿಗೆ ಸಾಕಷ್ಟು ಬೇಡಿಕೆ ಕಂಡುಬರುತ್ತದೆ. ಜನರೂ ವಿವಿಧ ಬಗೆಯ ಅಡುಗೆ ತಯಾರಿಸಿ ಸವಿಯುತ್ತಾರೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಬಳಸುವುದು ಕಷ್ಟಕರವಾಗಿದೆ. ಅವರೆಕಾಯಿ ಸೀಸನ್ ಆರಂಭವಾದರೆ ತರಕಾರಿ ಬಳಕೆ ಕಡಿಮೆಯಾಗಿ, ಬೆಲೆಯೂ ತೀವ್ರವಾಗಿ ಇಳಿಕೆಯಾಗುತಿತ್ತು.

ಕೊತ್ತಂಬರಿ ಸೊಪ್ಪು ಕೆ.ಜಿ ₹20, ಸಬ್ಬಕ್ಕಿ ಕೆ.ಜಿ ₹20, ಮೆಂತ್ಯ ಸೊಪ್ಪು ಕೆ.ಜಿ 30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಇಳಿಕೆಯಾಗಿದೆ. ಬೀನ್ಸ್ ಮತ್ತೆ ದುಬಾರಿಯಾಗಿದ್ದು, ಕೆ.ಜಿ ₹70–80ಕ್ಕೆ ಹೆಚ್ಚಳವಾಗಿದೆ. ಬೀಟ್ರೂಟ್ ಸಹ ಏರಿಕೆ ದಾಖಲಿಸಿದ್ದು, ಕೆ.ಜಿ ₹60–70ಕ್ಕೆ ಜಿಗಿದಿದೆ. ಟೊಮೆಟೊ ಬೆಲೆತೀವ್ರವಾಗಿ ಇಳಿಕೆಯಾಗಿದ್ದು, ಕೆ.ಜಿ ₹50–60ರಿಂದ ₹30–40ಕ್ಕೆ ಕುಸಿದಿದೆ. ಬದನೆಕಾಯಿ, ಎಲೆಕೋಸು, ಹಾಗಲಕಾಯಿ ಧಾರಣೆ ಇಳಿಕೆಯತ್ತ ಸಾಗಿದ್ದು, ನಿಂಬೆ ಹಣ್ಣು ಸ್ವಲ್ಪ ದುಬಾರಿಯಾಗಿದೆ.

ADVERTISEMENT

ದಾಳಿಂಬೆ ದುಬಾರಿ: ಸೇಬಿನ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ದಾಳಿಂಬೆ ದುಬಾರಿಯಾಗಿದೆ. ಪೈನಾ
ಪಲ್ ಸಹ ಹೆಚ್ಚಳವಾಗಿದೆ. ಕಲ್ಲಂಗಡಿ, ಕರಬೂಜ ಧಾರಣೆ ಅಲ್ಪ ಮಟ್ಟದಲ್ಲಿ ತಗ್ಗಿದೆ. ಉಳಿದಂತೆ ಇತರೆ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಧಾನ್ಯ ಏರಿಳಿತ: ಅಲಸಂದೆ ಕೆ.ಜಿ ₹100ಕ್ಕೆ ತಲು‍ಪಿದ್ದರೆ, ಅವರೆಕಾಳು ಬೆಲೆ ಕೊಂಚ ಇಳಿಕೆಯಾಗಿದೆ. ಉದ್ದಿನ ಬೇಳೆ ಕೆ.ಜಿ ₹10, ಹೆಸರು ಕಾಳು, ಕಡಲೆ ಬೀಜ ಸ್ವಲ್ಪ ಮಟ್ಟಿಗೆ ದುಬಾರಿಯಾಗಿದೆ. ಅಡುಗೆ ಎಣ್ಣೆಯಲ್ಲಿ ಸನ್‌ ಫ್ಲವರ್ ಕೆ.ಜಿ ₹130– 132ಕ್ಕೆ, ಪಾಮಾಯಿಲ್ ಕೆ.ಜಿ ₹115– 118ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೋಳಿ ಯಥಾಸ್ಥಿತಿ: ಹೊಸ ವರ್ಷಾಚರಣೆ ಸಮಯದಲ್ಲಿ ದುಬಾರಿಯಾಗಿದ್ದ ಕೋಳಿ ಬೆಲೆ ನಂತರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬ್ರಾಯ್ಲರ್ಕೋಳಿ ಕೆ.ಜಿ ₹150ಕ್ಕೆ, ರೆಡಿ ಚಿಕನ್ ₹220ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆ ಕೋಳಿ ಬೆಲೆ ಕೆ.ಜಿ ₹135ರಲ್ಲೇ ಮುಂದುವರೆದಿದೆ.

ಸೀಗಡಿ ದುಬಾರಿ: ಈ ವಾರ ಸೀಗಡಿ ಬೆಲೆ ತಿವ್ರವಾಗಿ ಹೆಚ್ಚಳ ಕಂಡಿದ್ದು, ಕೆ.ಜಿ ₹720ಕ್ಕೆ ತಲುಪಿದೆ. ಮಾರುಕಟ್ಟೆಗೆ ಸೀಗಡಿ ಬರುವುದು ಕಡಿಮೆಯಾಗಿದ್ದು, ಬೆಲೆ ಏರಿಕೆ ಕಾರಣ ಎಂದು ನಗರದ ಮತ್ಸ್ಯದರ್ಶಿನಿಯ ಮೂಲಗಳು ತಿಳಿಸಿವೆ.

ಬಂಗುಡೆ ಧಾರಣೆ ಇಳಿಕೆಯಾಗಿದ್ದು, ಕೆ.ಜಿ ₹210ಕ್ಕೆ, ಬೂತಾಯಿ ಕೆ.ಜಿ.ಗೆ ₹70 ಏರಿಕೆಯಾಗಿ, ₹200ಕ್ಕೆ ಹೆಚ್ಚಳವಾಗಿದೆ. ಅಂಜಲ್ ಕೆ.ಜಿ ₹680, ಕಪ್ಪು ಮಾಂಜಿ ಕೆ.ಜಿ ₹780ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.