ADVERTISEMENT

ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರದು: ವಿಎಚ್‌ಪಿ ಸಂಚಾಲಕ ಬಸವರಾಜ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 12:16 IST
Last Updated 22 ಅಕ್ಟೋಬರ್ 2021, 12:16 IST
ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರದು: ವಿಎಚ್‌ಪಿ ಸಂಚಾಲಕ ಬಸವರಾಜ್
ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರದು: ವಿಎಚ್‌ಪಿ ಸಂಚಾಲಕ ಬಸವರಾಜ್   

ತುಮಕೂರು: ‘ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ನಾವು ಪ್ರತಿಕ್ರಿಯೆ ಕೊಡಲು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರುವುದಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ (ವಿ.ಎಚ್‌.ಪಿ) ರಾಜ್ಯ ಸಂಚಾಲಕ ಬಸವರಾಜ್ ಎಚ್ಚರಿಕೆ ನೀಡಿದರು.

ಬಜರಂಗದಳ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ತುಮಕೂರು ನಗರ ಬಂದ್ ಸಮಯದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದೂಗಳ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದರೆ, ಗೋ ಹತ್ಯೆ, ಲವ್ ಜಿಹಾದ್ ನಡೆಸಿದರೆ ಸುಮ್ಮನೆ ಬಿಡುವುದಿಲ್ಲ. ನಾವು ಬಹುಸಂಖ್ಯಾತರು, ನಮ್ಮೊಂದಿಗೆ ಬದುಕಬೇಕಾದರೆ ಸರಿಯಾಗಿ ಇರಬೇಕು. ನಾವು ಹೇಳಿದಂತೆ ಕೇಳಬೇಕು. ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ. ಕಾನೂನು ಕೈಗೆ ತೆಗೆದುಕೊಂಡರೆ ತಕ್ಕ ಶಾಸ್ತಿ ಮಾಡುತ್ತೇವೆ’ ಎಂದು ಗುಡುಗಿದರು.

ADVERTISEMENT

‘ಹಿಂದೂ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿದರೆ ನಿಮಗೆ ಉಳಿಗಾಲವಿಲ್ಲ. ಕಣ್ಣೆತ್ತಿ ನೋಡಿದರೆ ಸುಮ್ಮನೆ ಬಿಡುವುದಿಲ್ಲ. ನಿಮ್ಮ ಹೆಣ್ಣು ಮಕ್ಕಳು ಉಳಿಯುವುದಿಲ್ಲ. ಈ ವೇದಿಕೆಯಿಂದಲೇ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ಹೇಳಿದರು.

ಹಿಂದೂ ಜಾಗರಣ ವೇದಿಕೆ ರಾಜ್ಯ ಕಾರ್ಯದರ್ಶಿ ಉಲ್ಲಾಸ್, ‘ಧರ್ಮ ರಕ್ಷಣೆ ಮಾಡಲು ಹಿಂಸೆ ಅನಿವಾರ್ಯವಾಗಿದೆ. ಜಿಹಾದಿ ಭಯೋತ್ಪಾದಕರಿಗೆ ಒಳ್ಳೆ ಮಾತಿನಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಕೊಡುತ್ತೇವೆ. ತಕ್ಕ ಪ್ರತಿಕ್ರಿಯೆ ಕೊಡಲು ಯುವಪಡೆ ಕಟ್ಟಲಾಗುವುದು. ರಾಷ್ಟ್ರ ರಕ್ಷಣೆಗೆ ರಸ್ತೆಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರೆಸಿವೆ. ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವಾಪಸ್ ಪಡೆದ ನಂತರ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್, ‘ಹಿಂದೂಗಳನ್ನು ಮುಟ್ಟಿದರೆ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ. ಭಾರತೀಯರಾಗಿ ಬದುಕಿ. ಇಲ್ಲವಾದರೆ ತಕ್ಕ ಶಾಸ್ತ್ರಿ ಮಾಡಲಾಗುವುದು. ನಮ್ಮವರ ಮೇಲೆ ಹಲ್ಲೆ ಮಾಡಿದರೆ ಸುಮ್ಮನಿರುವುದಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಡಲಾಗುವುದು’ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಜಿ.ಕೆ.ಶ್ರೀನಿವಾಸ್, ಸಂಘಟನೆ ಪ್ರಮುಖರಾದ ನಾಗೇಂದ್ರ ಪ್ರಸಾದ್, ಗೌರಿಶಂಕರ್, ಶಾಸಕ ಜ್ಯೋತಿಗಣೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.