ADVERTISEMENT

ಬೆಳ್ಳಾವಿ, ಕೋರಗೆ ಆದ್ಯತೆ ಮೇಲೆ ನೀರು: ಸಂಸದ ಜಿ.ಎಸ್.ಬಸವರಾಜು ಭರವಸೆ

ಎತ್ತಿನಹೊಳೆ, ಹೇಮಾವತಿ ನೀರು

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 5:46 IST
Last Updated 25 ಜೂನ್ 2020, 5:46 IST
ಕೋರ ಹೋಬಳಿ ಹರಿಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಸದ ಬಸವರಾಜ್‌ ಚಾಲನೆ ನೀಡಿದರು. ಶಾಸಕ ಡಾ.ಜಿ.ಪರಮೇಶ್ವರ ಉಪಸ್ಥಿತರಿದ್ದರು
ಕೋರ ಹೋಬಳಿ ಹರಿಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಸದ ಬಸವರಾಜ್‌ ಚಾಲನೆ ನೀಡಿದರು. ಶಾಸಕ ಡಾ.ಜಿ.ಪರಮೇಶ್ವರ ಉಪಸ್ಥಿತರಿದ್ದರು   

ಕೋರ: ಬೆಳ್ಳಾವಿ ಹಾಗೂ ಕೋರ ಹೋಬಳಿ ಕೆರೆಗಳಿಗೆ ಆದ್ಯತೆ ಮೇರೆಗೆ ಎತ್ತಿನಹೊಳೆ ಹಾಗೂ ಹೇಮಾವತಿ ನೀರು ಹರಿಸಲಾಗುವುದು ಎಂದು ಸಂಸದ ಜಿ.ಎಸ್. ಬಸವರಾಜು ಭರವಸೆ ನೀಡಿದರು.

ಹೋಬಳಿಯ ಹರಿಯಪ್ಪನಹಳ್ಳಿ ಗೋಮಾಳದಲ್ಲಿ ₹ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೃಹತ್ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ರೂಪಿಸಿರುವ ಹೇಮಾವತಿ, ಎತ್ತಿನಹೊಳೆ ಯೋಜನೆಯಿಂದ ಹತ್ತಾರು ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬಹುದು. ಕೋರ, ಕೆಸ್ತೂರು, ಮಾವುಕೆರೆ, ಚಿಕ್ಕತೊಟ್ಲುಕೆರೆ, ದೇವಲಾಪುರ, ಬ್ರಹ್ಮಸಂದ್ರ ಗ್ರಾಮಗಳ ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಲ್ಲಿ ಅರ್ಧ ಟಿಎಂಸಿ ನೀರು ನಿಗದಿ ಪಡಿಸಿ ಕೆರೆಗಳನ್ನು ತುಂಬಿಸಲು ಯೋಜನೆ ಸಿದ್ಧಗೊಂಡಿದೆ ಎಂದರು.

ADVERTISEMENT

ಬೆಳ್ಳಾವಿ ಹೋಬಳಿಯಲ್ಲಿ ದೇವನಹಳ್ಳಿ ಮಾದರಿ ವಿಮಾನ ನಿಲ್ದಾಣ ಸ್ಥಾಪನೆ ಪ್ರಸ್ತಾವ ಬಂದಿದೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಹುಡುಕಲು ಸಮೀಕ್ಷೆ ನಡೆಯುತ್ತಿದೆ. ಈ ಭಾಗದಲ್ಲಿ ವಿಮಾನ ನಿಲ್ದಾಣವಾದರೆ ತುಮಕೂರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ ಎಂದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಸ್ತಾಪನೆಯಾಗಿದ್ದು, ಸ್ಥಳೀಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದೆ ಕಡೆಗಣಿಸಿವೆ ಎಂದರು.

ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಟೇನಹಳ್ಳಿ ಶಿವಕುಮಾರ್, ಕೋರ ಗ್ರಾಮಪಂಚಾಯಿತಿ ಅಧ್ಯಕ್ಷ ನಜೀರ್ ಅಹಮದ್, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ್, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮಾಜಿ ಎಪಿಎಂಸಿ ಸದಸ್ಯರಾದ ಚಂದ್ರಕಲ, ಯಧುಕುಮಾರ್, ಬಿಜೆಪಿ ಮುಖಂಡರಾದ ಕೆಸ್ತೂರು ಚಂದ್ಪಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.