ADVERTISEMENT

ತುಮಕೂರು: ನೀರಿಲ್ಲ, ನೀರಿಲ್ಲ, ನಗರದಲ್ಲಿ ನೀರಿಲ್ಲ....

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 5:32 IST
Last Updated 20 ಏಪ್ರಿಲ್ 2024, 5:32 IST
ತುಮಕೂರು ರೈಲು ನಿಲ್ದಾಣದಲ್ಲಿ ಮೂಲೆ ಸೇರಿರುವ ಕುಡಿಯುವ ನೀರಿನ ಘಟಕ
ತುಮಕೂರು ರೈಲು ನಿಲ್ದಾಣದಲ್ಲಿ ಮೂಲೆ ಸೇರಿರುವ ಕುಡಿಯುವ ನೀರಿನ ಘಟಕ   

ತುಮಕೂರು: ‘ಅಧಿಕಾರಿಗಳು ಹಳ್ಳಿ ಕಡೆ ಬಂದ್ರೆ ಅವರಿಗೆ ಹೊಟ್ಟೆ ತುಂಬ ಊಟ ಹಾಕಿ ಕಳಿಸ್ತೀವಿ, ನಗರಕ್ಕೆ ಬಂದ ನಮಗೆ ಒಂದು ಲೋಟ ನೀರು ಕೊಡಲು ಅವರಿಂದ ಆಗುತ್ತಿಲ್ಲ’...

ಪಾವಗಡದ ರಾಮಾಂಜಿನಿ ಎಂಬುವರು ಹೀಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ಅವರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು ಸಿಗದೆ ಪರದಾಡಿದರು. ಕೊನೆಗೆ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸಿ ದಾಹ ತೀರಿಸಿಕೊಂಡರು.

ಬಸ್‌ ನಿಲ್ದಾಣ ಒಳಗೊಂಡಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಹಣ ಕೊಟ್ಟು ನೀರು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40ರ ಗಡಿ ದಾಟಿದ್ದು, ಹಿಂದೆಂದೂ ಕಂಡು ಕೇಳರಿಯದ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ನಡೆದು ಸುಸ್ತಾಗಿ ಸರ್ಕಾರಿ ಕಚೇರಿ, ಬಸ್‌ ನಿಲ್ದಾಣ, ರೈಲು ನಿಲ್ದಾಣಕ್ಕೆ ಬಂದವರು ನೀರಿಗಾಗಿ ಹುಡುಕುತ್ತಿದ್ದಾರೆ.

ADVERTISEMENT

ಗ್ರಾಮೀಣ ಭಾಗದಿಂದ ಕಾರ್ಯ ನಿಮಿತ್ತ ನಗರದ ಕಡೆ ಬಂದವರಿಗೆ ಕನಿಷ್ಠ ಕುಡಿಯುವ ನೀರು ಸಿಗುತ್ತಿಲ್ಲ. ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಒಂದು ನಲ್ಲಿಯಲ್ಲಿ ಮಾತ್ರ ನೀರು ಬರುತ್ತಿದೆ. ಉಳಿದ ನಲ್ಲಿಗಳು ಮುರಿದು ಹೋಗಿವೆ. ಘಟಕದ ಮುಂಭಾಗದ ಜಾಗವನ್ನು ವಾಹನಗಳು ಆಕ್ರಮಿಸಿಕೊಂಡಿವೆ. ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇಲ್ಲಿಂದ ನೀರು ತುಂಬಿಸಿಕೊಂಡು ಹೋಗಲು ಆಗುತ್ತಿಲ್ಲ.

‘ಆಡಳಿತ ಕಚೇರಿಯ ಪಕ್ಕದಲ್ಲಿಯೇ ಇರುವ ನೀರಿನ ಘಟಕದ ಬಗ್ಗೆ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಗಮನ ಹರಿಸಿಲ್ಲ. ತಮ್ಮ ಕಚೇರಿಗೆ ಬಂದ ಜನರಿಗೆ ಶುದ್ಧ ನೀರು ಕೊಡಲು ಆಗುತ್ತಿಲ್ಲ. ಇನ್ನು ಇಡೀ ನಗರಕ್ಕೆ ಹೇಗೆ ನೀರು ಪೂರೈಸುತ್ತಾರೆ’ ಎಂದು ನಗರದ ನಿವಾಸಿ ರಮೇಶ್‌ ಪ್ರಶ್ನಿಸಿದರು.

ನಿತ್ಯ ನೂರಾರು ಜನ ಸೇರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣಗಳಲ್ಲೂ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಒಂದು ನೀರಿನ ಘಟಕ ಇದ್ದು, ಅದರಲ್ಲಿ ಒಂದು ನಲ್ಲಿಯಲ್ಲಿ ಮಾತ್ರ ನೀರು ಬರುತ್ತಿದೆ. ಮತ್ತೊಂದು ಘಟಕ ದೂಳು ಹಿಡಿದಿದ್ದು, ಅದನ್ನು ಸರಿಪಡಿಸುವ ಕೆಲಸವಾಗಿಲ್ಲ. ಘಟಕ ಹಾಳಾಗಿ ಹಲವು ವರ್ಷಗಳು ಕಳೆದಿದ್ದರೂ ರಿಪೇರಿ ಮಾಡಿಸಿಲ್ಲ.

ತುಮಕೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನೀರಿನ ಘಟಕ ಹಾಳಾಗಿರುವುದು
ತುಮಕೂರು ಮಹಾನಗರ ಪಾಲಿಕೆ ಕಚೇರಿ ಪಕ್ಕದ ಕುಡಿಯುವ ನೀರಿನ ಘಟಕದ ಮುಂದೆ ಬೈಕ್‌ ನಿಲ್ಲಿಸಿರುವುದು

ರೈಲು ನಿಲ್ದಾಣದಲ್ಲಿಯೂ ನೀರಿಲ್ಲ!

ರೈಲು ನಿಲ್ದಾಣದಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕುಡಿಯುವ ನೀರಿನ ಘಟಕ ಮೂಲೆ ಸೇರಿದ್ದು ಕಸದ ಬುಟ್ಟಿಯಾಗಿ ಬದಲಾಗಿದೆ. ಕನಿಷ್ಠ ಬೇಸಿಗೆ ಸಮಯದಲ್ಲಾದರೂ ಘಟಕ ಶುರು ಮಾಡಿದರೆ ತುಂಬಾ ಜನರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳಿಗೆ ಇದಕ್ಕೆ ಅವಕಾಶವೇ ಕೊಡುತ್ತಿಲ್ಲ. ಸಾರ್ವಜನಿಕರು ಹೋಟೆಲ್‌ ಚಹಾ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.