ADVERTISEMENT

ತುಮಕೂರು: 83 ಗ್ರಾಮಗಳಿಗೆ ನಲ್ಲಿ ನೀರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 4:45 IST
Last Updated 3 ಜೂನ್ 2021, 4:45 IST
ವಿದ್ಯಾಕುಮಾರಿ
ವಿದ್ಯಾಕುಮಾರಿ   

ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಸುಸ್ಥಿರ ಜಲಮೂಲ ಹೊಂದಿರುವ 83 ಗ್ರಾಮಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ನೀರು
ಮತ್ತು ನೈರ್ಮಲ್ಯ ಮಿಷನ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಈ ಯೋಜನೆಯಡಿ 7 ಬಹುಗ್ರಾಮ ಕುಡಿಯುವ ಯೋಜನೆ ಮೂಲಕ 83 ಸುಸ್ಥಿರ ಜಲಮೂಲ ಹೊಂದಿರುವ ಗ್ರಾಮಗಳ ಪ್ರತಿ ಮನೆಗೂ 24X7 ನೀರು ಒದಗಿಸಲಾಗುತ್ತದೆ. ನಲ್ಲಿ ಅಳವಡಿಸುವ ಕ್ರಿಯಾ ಯೋಜನೆಗೆ ಒಪ್ಪಿಗೆ ಪಡೆದುಕೊಂಡು ನಂತರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ.

ADVERTISEMENT

ಜಲ ಜೀವನ್ ಮಿಷನ್ ಯೋಜನೆಯಡಿ ಗುರುತಿಸಿರುವ ಹಳ್ಳಿಗಳಲ್ಲಿ ಶೇ 100ರಷ್ಟು ನಲ್ಲಿ ಅಳವಡಿಸಬೇಕು. ಮನೆಗೆ ನಲ್ಲಿ ಅಳವಡಿಸಿಲ್ಲ ಎಂಬ ದೂರುಗಳು ಬರದಂತೆ ಪ್ರತಿ ಮನೆಗೂ ಅವಳಡಿಸಬೇಕು ಎಂದು ಎಂಜಿನಿಯರ್‌ಗಳಿಗೆಕೆ.ವಿದ್ಯಾಕುಮಾರಿ ನಿರ್ದೇಶನ ನೀಡಿದರು.

ಮುಂದಿನ ದಿನಗಳಲ್ಲಿ ನೀರಿನ ಮೂಲ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮಕ್ಕೂ ಆದ್ಯತೆ ಕೊಡಬೇಕು. ನೀರಿನ ಮಟ್ಟ ವೃದ್ಧಿಯಾದರೆ ಜಲಮೂಲ ಲಭ್ಯವಾಗಲಿದೆ ಎಂದರು.

ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ‘ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಸುರಕ್ಷಿತ ಕುಡಿಯುವ ನೀರು ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಜಲಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಯಾವುದೇ ಕಾರಣಕ್ಕೂ ವಿಫಲವಾಗದಂತೆ ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕೆ.ಮುತ್ತಪ್ಪ, ಎಂಜಿನಿಯರ್ ಮಮತಾ, ಜಿಲ್ಲೆಯಲ್ಲಿ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ನಲ್ಲಿ ಅಳವಡಿಕೆ, ಸುಸ್ಥಿರ ನೀರಿನ ಮೂಲಗಳ ಬಗ್ಗೆ ವಿವರಣೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ, ಅರಣ್ಯಾಧಿಕಾರಿ ಡಿ.ಎನ್.ನಾಗರಾಜು, ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರುಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.