ADVERTISEMENT

ಕೊರಟಗೆರೆ | ಮಹಿಳೆ ಕೊಲೆ: ಅಳಿಯ ಸೇರಿ ನಾಲ್ವರ ವಶ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:36 IST
Last Updated 11 ಆಗಸ್ಟ್ 2025, 2:36 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕೊರಟಗೆರೆ: ತುಮಕೂರು ತಾಲ್ಲೂಕಿನ ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಎಂಬುವರನ್ನು ಕೊಲೆ ಮಾಡಿ, ವಿವಿಧೆಡೆ ದೇಹದ ಅಂಗಾಂಗ ಬಿಸಾಡಿದ ಆರೋಪದ ಮೇರೆಗೆ ಲಕ್ಷ್ಮಿದೇವಮ್ಮ ಅಳಿಯ ಡಾ.ರಾಮಚಂದ್ರ ಸೇರಿ ನಾಲ್ವರನ್ನು ಕೊರಟಗೆರೆ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಲಕ್ಷ್ಮಿದೇವಮ್ಮ ಮಗಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದರು. ರಾಮಚಂದ್ರ ಇದರಿಂದ ಬೇಸತ್ತು ಹತ್ಯೆಗೆ ಸಂಚು ರೂಪಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆ. 3ರಂದು ಲಕ್ಷ್ಮಿದೇವಮ್ಮ ಮಗಳನ್ನು ನೋಡಿ ಬರಲು ಮನೆಯಿಂದ ಹೋಗಿದ್ದರು. ಆ. 7ರಂದು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿ, ಕೋಳಾಲ ಹೋಬಳಿ ವ್ಯಾಪ್ತಿಯ ಮಧ್ಯವೆಂಕಟಾಪುರ ಹಾಗೂ ಚನ್ನರಾಯನದುರ್ಗಾ ಹೋಬಳಿ ವ್ಯಾಪ್ತಿಯ ಬೆಂಡೋಣೆ ಗ್ರಾಮದ ಬಳಿ ದೇಹದ ಕೆಲ ಅಂಗಾಂಗಗಳು ಪತ್ತೆಯಾಗಿದ್ದವು. ಅದೇ ದಿನ ರಾತ್ರಿ ಸಿದ್ಧರಬೆಟ್ಟದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಉಡುಪು ಸಿಕ್ಕಿತ್ತು.

ಲಕ್ಷ್ಮಿದೇವಮ್ಮ ಕಾಣೆಯಾದ ಬಗ್ಗೆ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಕುಟುಂಬಸ್ಥರನ್ನು ಕರೆದು ವಿಚಾರಿಸಿದ್ದು, ಕೈ ಮೇಲಿನ ಅಚ್ಚೆ, ಮುಖದ ಮೇಲಿನ ಕೆಲವು ಗುರುತು, ಉಡುಪುಗಳ ಆಧಾರದ ಮೇಲೆ ಕೊಲೆಯಾಗಿರುವುದು ಲಕ್ಷ್ಮಿದೇವಮ್ಮ ಎಂಬುವುದು ದೃಢಪಟ್ಟಿತ್ತು. 18 ಕಡೆಗಳಲ್ಲಿ ಅಂಗಾಂಗ ಎಸೆದಿದ್ದರಿಂದ ಆರೋಪಿಗಳ ಪತ್ತೆ ಸವಾಲಾಗಿತ್ತು. ಪ್ರಕರಣದ ತನಿಖೆಗೆ 8 ತಂಡಗಳನ್ನು ನಿಯೋಜಿಸಲಾಗಿತ್ತು.

ಫಾರ್ಮ್‌ಹೌಸ್‌ನಲ್ಲಿ ಕೊಲೆ: ‘ಕೋಳಾಲ ಬಳಿಯ ಫಾರ್ಮ್‌ಹೌಸ್‌ನಲ್ಲಿ ಲಕ್ಷ್ಮಿದೇವಮ್ಮ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಿರಲಿ ಎಂದು ವಿವಿಧೆಡೆ ಅಂಗಾಂಗ ಎಸೆದಿದ್ದರು. ಮೃತರ ಗುರುತು ಪತ್ತೆ ಸಮಯದಲ್ಲಿ ರಾಮಚಂದ್ರ ಕಾಣಿಸಿರಲಿಲ್ಲ. ಕೊಲೆಯ ನಂತರ ಧರ್ಮಸ್ಥಳ ಪ್ರವಾಸಕ್ಕೆ ಹೋಗಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು. ಆರೋಪಿಗಳನ್ನು ಧರ್ಮಸ್ಥಳದಲ್ಲಿ ವಶಕ್ಕೆ ಪಡೆದು ಕೊರಟಗೆರೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.