ADVERTISEMENT

ತುಮಕೂರು: ಕುಮಾರಸ್ವಾಮಿ ವಿರುದ್ಧ‌ ಕಾಂಗ್ರೆಸ್ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 6:13 IST
Last Updated 16 ಏಪ್ರಿಲ್ 2024, 6:13 IST

ತುಮಕೂರು: ‘ಗ್ಯಾರಂಟಿಯಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂದು ಹೇಳಿರುವ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಳ್ಳೆಯ ಮನೆತನದಿಂದ ಬಂದ ವ್ಯಕ್ತಿ, ಮಾಜಿ ಪ್ರಧಾನಿಯ ಮಗ ಈ ರೀತಿ ಮಾತನಾಡುತ್ತಿದ್ದಾರೆ. ಮಹಿಳೆಯರು ಯಾವ ರೀತಿಯಲ್ಲಿ ದಾರಿ ತಪ್ಪಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಆಗ್ರಹಿಸಿದರು.

ಒಳ್ಳೆಯ ಮನೆತನದಲ್ಲಿ ಹುಟ್ಟಿದವರು ಇಂತಹ ಮಾತು ಆಡುವುದಿಲ್ಲ. ಕುಮಾರಸ್ವಾಮಿ, ‘₹100, ₹200ಕ್ಕೆ ಮಹಿಳೆಯರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಇಲ್ಲಿ ಯಾರೂ ಹಣ ತೆಗೆದುಕೊಂಡು ಬಂದು ಪ್ರತಿಭಟನೆ ಮಾಡಲು ಬಂದಿಲ್ಲ. ಇದೇ ರೀತಿಯಾಗಿ ನಾಲಿಗೆ ಹರಿ ಬಿಟ್ಟರೆ ಸುಮ್ಮನೆ ಕೂರುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ADVERTISEMENT

ರಾಜ್ಯದ ಲಕ್ಷಾಂತರ ಮಹಿಳೆಯರು ಗ್ಯಾರಂಟಿ ಯೋಜನೆಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಗೆ ಸರ್ಕಾರದ ಹಣ ಸಹಾಯವಾಗುತ್ತಿದೆ. ಈ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬುವುದು ಎಷ್ಟರ ಮಟ್ಟಿಗೆ ಸರಿ. ಮಹಿಳೆಯರು ದೇವಸ್ಥಾನಕ್ಕೆ ಹೋದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರೆ ದಾರಿ ತಪ್ಪಿದಂತೆಯೇ? ಎಂದು ಪ್ರಶ್ನಿಸಿದರು.

‘ನೀವು ದಾರಿ ತಪ್ಪಿ, ಅಧಿಕಾರದ ದಾಹಕ್ಕಾಗಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ನಿಮ್ಮ ಪಕ್ಷದಲ್ಲಿ ನಿಮಗೆ ಅಸ್ತಿತ್ವ ಇರಲಿಲ್ಲವೇ? ನಾಲ್ಕು ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿಗೆ ಹೋಗಬೇಕಿತ್ತಾ? ಎಂದು ಕೇಳಿದರು.

ಮಹಾನಗರ ಪಾಲಿಕೆ ಮಾಜಿ ಮೇಯರ್‌ ಎಂ.ಪ್ರಭಾವತಿ, ‘ಕುಮಾರಸ್ವಾಮಿ ಹೇಳಿಕೆ ತಪ್ಪು. ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಪದಕ್ಕೆ ಏನೇನೋ ಅರ್ಥ ಇದೆ. ಅವರು ಇಂತಹ ಮಾತು ಆಡಬಾರದು’ ಎಂದರು.

ಕಾಂಗ್ರೆಸ್‌ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ವಸುಂದರಾ, ವಿಜಯಲಕ್ಷ್ಮಿ, ಕಾರ್ಯದರ್ಶಿ ಸೌಭಾಗ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.