ADVERTISEMENT

ಎತ್ತಿನಹೊಳೆ ನೀರಾವರಿ ಯೋಜನೆ ಕೇಂದ್ರ, ವಿಶ್ವೇಶ್ವರಯ್ಯ ಜಲ ನಿಗಮದಿಂದ ವಿಳಂಬ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:11 IST
Last Updated 16 ಡಿಸೆಂಬರ್ 2025, 5:11 IST
ತುಮಕೂರಿನಲ್ಲಿ ಸೋಮವಾರ ನಡೆದ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ಕಾರಣಗಳು ಹಾಗೂ ಪರಿಹಾರ ಕುರಿತ ಸಮಾಲೋಚನಾ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿದರು. ಮುಖಂಡರಾದ ಸಂಜೀವಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ಷಡಕ್ಷರಿ, ಗೋವಿಂದೇಗೌಡ, ರೇವಣ್ಣಸಿದ್ದಯ್ಯ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಸೋಮವಾರ ನಡೆದ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ಕಾರಣಗಳು ಹಾಗೂ ಪರಿಹಾರ ಕುರಿತ ಸಮಾಲೋಚನಾ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿದರು. ಮುಖಂಡರಾದ ಸಂಜೀವಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ಷಡಕ್ಷರಿ, ಗೋವಿಂದೇಗೌಡ, ರೇವಣ್ಣಸಿದ್ದಯ್ಯ ಇತರರು ಭಾಗವಹಿಸಿದ್ದರು   

ತುಮಕೂರು: ಎತ್ತಿನಹೊಳೆ ನೀರಾವರಿ ಯೋಜನೆ ವಿಳಂಬವಾಗಿದ್ದು, ಯೋಜನೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಜನರು ಹೋರಾಟ ರೂಪಿಸುವಂತೆ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಸಲಹೆ ಮಾಡಿದರು.

ನಗರದಲ್ಲಿ ಸೋಮವಾರ ನಡೆದ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ಕಾರಣಗಳು ಹಾಗೂ ಪರಿಹಾರ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಇಲ್ಲದ ಸಬೂಬು ತೆಗೆದು ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಯೋಜನೆ ವ್ಯಾಪ್ತಿಗೆ ಒಳಪಡುವ ಹಾಸನ, ತುಮಕೂರು, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಜನರು ಈಗಲೇ ಎಚ್ಚೆತ್ತುಕೊಂಡು ಹೋರಾಟ ರೂಪಿಸಬೇಕಿದೆ. ಕೇಂದ್ರದ ಎಲ್ಲ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿ, ಯೋಜನೆ ಪೂರ್ಣಗೊಳ್ಳುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಡಿ. 18ರಂದು ನಗರದ ಅಮರಜೋತಿ ನಗರದಲ್ಲಿರುವ ಎತ್ತಿನಹೊಳೆ ಯೋಜನೆಯ ಕಚೇರಿಗೆ ಸಾರ್ವಜನಿಕರೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಲಾಗುವುದು. ಈಗಾಗಲೇ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳಿಂದ ವಿಳಂಬವಾಗಿದೆ ಎಂದು ಕೇಂದ್ರ ಹೇಳುತ್ತಿದೆ ಎಂದರು.

ಕೇಂದ್ರ ಸರ್ಕಾರ ಮೊದಲಿಗೆ 11, ಈಗ 3 ಪ್ರಶ್ನೆಗಳನ್ನು ಕೇಳಿದೆ. ಕೇಂದ್ರದ ಅರಣ್ಯ ಹಾಗೂ ಪರಿಸರ ಇಲಾಖೆ ಸಮಿತಿಗಳು ರಾಜ್ಯಕ್ಕೆ ಬಂದ ಪರಿಶೀಲನೆ ನಡೆಸಿವೆ. ಇಂತಹ ಮಹತ್ವದ ವಿಚಾರಗಳನ್ನು ರಾಜ್ಯ ಜಲಸಂಪನ್ಮೂಲ ಸಚಿವ, ಯೋಜನಾ ವ್ಯಾಪ್ತಿಗೆ ಒಳಪಡುವ ಸಚಿವರ ಗಮನಕ್ಕೆ ತಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ವಿವರಣೆ ನೀಡಬೇಕಿತ್ತು. ಆಗ ನಿರ್ಲಕ್ಷ್ಯ ವಹಿಸಿ, ಹೋರಾಟ ಆರಂಭವಾದ ನಂತರ ದೆಹಲಿಗೆ ತೆರಳಿ ಸಮಜಾಯಿಸಿ ನೀಡಲು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಖಂಡರಾದ ಸಂಜೀವಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ಷಡಕ್ಷರಿ, ಗೋವಿಂದೇಗೌಡ, ರೇವಣ್ಣಸಿದ್ದಯ್ಯ, ಪಿ.ಶಿವಾಜಿ, ಪಿ.ಎನ್.ರಾಮಯ್ಯ, ಗಣೇಶ್, ಆರ್.ವಿ.ಪುಟ್ಟಕಾಮಣ್ಣ, ಸೌಭಾಗ್ಯ,ಯಶೋದಮ್ಮ, ಸಿಮೆಂಟ್ ಮಂಜುನಾಥ್, ಆದಿಲ್, ಜೈನ್ ಷೇಕ್ ಫಯಾಜ್, ಬಿ.ಉಮೇಶ್, ಹರೀಶ್, ದಯಾನಂದ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.