ADVERTISEMENT

ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ: ಆಚಾರ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 7:05 IST
Last Updated 28 ಫೆಬ್ರುವರಿ 2011, 7:05 IST

ಉಡುಪಿ: ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡುವ ಉದ್ದೇಶವಿದ್ದು ಆ ಬಗ್ಗೆ ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ರಾಜ್ಯದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ತಿಳಿಸಿದರು.ಉದ್ಯೋಗ ಮತ್ತು ತರಬೇತಿ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ನಬಾರ್ಡ್ ಆರ್‌ಐಡಿಎಫ್ ಯೋಜನೆಯಡಿ ಅಲೆವೂರಿನಲ್ಲಿ ಹಾಗೂ ಪೆರ್ಡೂರಿನಲ್ಲಿ ಐಟಿಐ ಸಂಸ್ಥೆ ಕಟ್ಟಡಗಳಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಶಿಕ್ಷಣದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ಕಳೆದ ನಾಲ್ಕು ವರ್ಷದ ಹಿಂದೆ ಬಜೆಟ್‌ನಲ್ಲಿ ಶಿಕ್ಷಣಕ್ಕೆ 4400 ಕೋಟಿ ಇತ್ತು. ಆದರೆ ಈ ವರ್ಷ 12,284 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಶಿಕ್ಷಣಕ್ಕೆ ಮೀಸಲಿಟ್ಟಿದೆ. ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಭವಿಷ್ಯ ಬೆಳಗುತ್ತದೆ. ಆ ಮೂಲಕ ಮನೆ, ಆ ಪರಿಸರ, ರಾಜ್ಯ ದೇಶ ಎಲ್ಲವುಗಳ ಉದ್ಧಾರ ಸಾಧ್ಯ. ಅದಕ್ಕಾಗಿಯೇ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅನುದಾನ ಮೀಸಲಿಟ್ಟಿದೆ ಎಂದರು.

ಪ್ರಸ್ತುತ ಅಲೆವೂರು ಮತ್ತು ಪೆರ್ಡೂರಿನಲ್ಲಿ ಶಂಕುಸ್ಥಾಪನೆಗೊಂಡ ಐಟಿಐಗಳಿಗೆ ತಲಾ ಮೂರು ಕೋಟಿ ಸೇರಿ ಒಟ್ಟು 10 ಕೋಟಿ ವೆಚ್ಚದಲ್ಲಿ ಸುಸಜ್ಜಿತಗೊಳಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ (ಇದೇ ಜೂನ್) ಪೆರ್ಡೂರಿನಲ್ಲಿ ಜೂನಿಯರ್ ಕಾಲೇಜು ಕೂಡ ಸ್ಥಾಪನೆಯಾಗಲಿದೆ ಎಂದು ಆಚಾರ್ಯ ತಿಳಿಸಿದರು.ಪೆರ್ಡೂರು ಗ್ರಾ.ಪಂ.ಅಧ್ಯಕ್ಷೆ ಶಾಂತಾ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ,  ಜಿಲ್ಲಾ ಪಂಚಾಯಿತಿ ಸದಸ್ಯ ಉಪೇಂದ್ರ ನಾಯಕ್, ತಾ.ಪಂ. ಸದಸ್ಯ ರಾಮಕುಲಾಲ್, ನಾಗವೇಣಿ, ಪೆರ್ಡೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ಮೈಸೂರು ವಿಭಾಗೀಯ ಕಚೇರಿ ಜಂಟಿ ನಿರ್ದೇಶಕ ಎಚ್.ವಿ.ವೆಂಕಟರಾಮು, ಪ್ರಾಂಶುಪಾಲ ಕೆ.ಎಲ್.ನಾಗರಾಜ ಹಾಗೂ ಜಗದೀಶ್ ಮತ್ತಿತರರು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.