ADVERTISEMENT

ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ–ಜೋಷಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:51 IST
Last Updated 6 ಜನವರಿ 2014, 6:51 IST

ಬೈಂದೂರು : ಅರವತ್ತೇಳು ವರ್ಷಗಳುದ್ದಕ್ಕೆ ದೇಶದ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ದೇಶದ ಅಭಿವೃದ್ಧಿ ಸಾಧಿಸುವುದು ಸಾಧ್ಯವಾಗಿಲ್ಲ. ಬೆಲೆ ಏರಿಕೆ, ಭ್ರಷ್ಟಾಚಾರ, ಭಯೋತ್ಪಾದನೆಯ ಹೆಚ್ಚಳ, ದೇಶದ ಅಸುರಕ್ಷತೆ ಅದರ ಕೊಡುಗೆಗಳಾಗಿವೆ. ಅದರಲ್ಲೂ ಪ್ರಸಕ್ತ ಕೇಂದ್ರ ಸರ್ಕಾರ ಅತ್ಯಂತ ಜನವಿರೋಧಿ, ಭ್ರಷ್ಟ ಮತ್ತು ನಿಷ್ಕ್ರಿಯ ಸರ್ಕಾರವೆನಿಸಿದೆ.  ಹೀಗಾಗಿ ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸಬೇಕಾಗಿದೆ. ಅದಕ್ಕಾಗಿ ಜನರು ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ ಹೇಳಿದರು
 
ಭಾನುವಾರ ಇಲ್ಲಿ ಮುಕ್ತಾಯಗೊಂಡ ಪಕ್ಷದ ಉಡುಪಿ ಜಿಲ್ಲಾ ಘಟಕದ ನಾಲ್ಕು ದಿನಗಳ  ಜನಾಂದೋಲನ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಡಿಕೆ ನಿಷೇಧ ಪರ ವರದಿ ಸಲ್ಲಿಸುವ ಮೂಲಕ  ಅಡಿಕೆ ಬೆಳೆಗಾರರ ಮರಣ ಶಾಸನ ಬರೆದಿದೆ. ಈ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಬಿಜೆಪಿಗೆ ಅವಕಾಶ ನಿರಾಕರಿಸಲಾಯಿತು. ಈ ಸರ್ಕಾರ ಭಯೋತ್ಪಾದನೆ, ಗಡಿಯಲ್ಲಿನ ಪಾಕಿಸ್ತಾನ ಮತ್ತು ಚೀನಾದ ತಂಟೆ, ನಕ್ಸಲ್‌ ಸಮಸ್ಯೆ, ನಿತ್ಯಾವಶ್ಯಕ ವಸ್ತುಗಳ ಬೆಲೆ ಏರಿಕೆಯಂತಹ ಗಂಭೀರ ವಿಚಾರಗಳ ಕುರಿತು ಮೌನವಾಗಿದೆ ಎಂದು ಅವರು ದೂರಿದರು.

ಸರ್ಕಾರದ ಸಡಿಲು ಧೋರಣೆಯ ಕಾರಣದಿಂದ ಯಾಸೀನ್ ಭಟ್ಕಳ್‌ ಸೂರತ್‌ನಲ್ಲಿ ಅಣುಬಾಂಬ್‌ ಸ್ಫೋಟಿಸುವ ಚಿಂತನೆ ನಡೆಸುವ ಮಟ್ಟಕ್ಕೆ ಬೆಳೆದಿದ್ದಾನೆ. ಭಯೋತ್ಪಾದನೆ ಮತ್ತು ನಕ್ಸಲ್‌ ಹಾವಳಿ ಕರಾವಳಿಗೂ ವ್ಯಾಪಿಸಿದೆ. ಆದರೆ ಕಾಂಗ್ರೆಸ್ ಇವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿ­ದರು. ಈ ಎಲ್ಲ ದುರಂತಗಳಿಂದ ದೇಶವನ್ನು ಪಾರು ಮಾಡಲು ಸಮರ್ಥ ನಾಯಕತ್ವದ ಅಗತ್ಯವಿದೆ. ಭಾಜಪದ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಆ ಸಾಮರ್ಥ್ಯವಿದೆ ಎಂದು ಅವರು ಹೇಳಿದರು. ಬಿ. ಎಸ್‌ ಯಡಿಯೂರಪ್ಪ ಈಗ ಪಕ್ಷಕ್ಕೆ ಮರಳುತ್ತಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 20 ಸ್ಥಾನ ಗೆಲ್ಲಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಂಸದ ಬಿ. ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಗಣೇಶ ಕಾರ್ಣಿಕ್, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್‌ ಶೆಟ್ಟಿ ವಂದಿಸಿದರು. ಸದಾನಂದ ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಪಕ್ಷದ ಪ್ರಮುಖರಾದ ಉದಯಕುಮಾರ ಶೆಟ್ಟಿ, ವಿಲಾಸ್‌ ನಾಯಕ್‌, ಸಂಧ್ಯಾ ರಮೇಶ್‌, ವೀಣಾ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.