ADVERTISEMENT

ಪರಿಹಾರ ನೀಡುವಾಗ ಉದಾರತೆ ತೋರಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಆರ್‌.ವಿ.ದೇಶಪಾಂಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:49 IST
Last Updated 15 ಜೂನ್ 2018, 13:49 IST

ಉಡುಪಿ: ಪ್ರಾಕೃತಿಕ ವಿಕೋಪಗ ಳಿಗೆ ಪರಿಹಾರ ನೀಡಲು ಹಣದ ಕೊರತೆ ಕಾರಣವಾಗಬಾರದು. ಕನಿಷ್ಠ ₹10 ಲಕ್ಷ ಅನುದಾನವನ್ನು ತಹಶೀಲ್ದಾರ್, ಸಹಾಯಕ ಆಯುಕ್ತರ ಖಾತೆಗಳಿಗೂ ವರ್ಗಾಯಿಸಿ. ಇದರಿಂದ ಪರಿಹಾರ ನೀಡುವಿಕೆಗೆ ವೇಗ ದೊರೆಯಲಿದೆ ಎಂದು ಕಂದಾಯ ಹಾಗೂ ಕೌಶಲಾಭಿ ವೃದ್ಧಿ ಖಾತೆ ಸಚಿವ ಆರ್‌.ವಿ. ದೇಶಪಾಂಡೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಪ್ರಾಕೃತಿಕ ವಿಕೋಪಕ್ಕೆ ತುರ್ತು ಪರಿಹಾರ ವಿತರಿಸಲಾಗಿದ್ದು, ಮನೆಗಳ ಮೇಲೆ ಮರ ಬಿದ್ದಿದ್ದರೆ ಸಂಪೂರ್ಣ ಹಾನಿ ಎಂದೇ ಪರಿಗಣಿಸಿ ಪರಿಹಾರ ವಿತರಿಸಿ. ಮತ್ತೊಮ್ಮೆ ಮನೆಹಾನಿ ಪ್ರಕರಣಗಳನ್ನು ಪರಿಶೀಲಿಸಿ ನೊಂದವರಿಗೆ ಪರಿಹಾರ ವಿತರಿಸಿ ಎಂದರು.

ADVERTISEMENT

ಕುಡಿಯುವ ನೀರು, ಪಶುಸಂಗೋ ಪನಾ ಇಲಾಖೆ, ತೋಟಗಾರಿಕೆ, ಕೃಷಿ, ಮೆಸ್ಕಾಂ, ಅರಣ್ಯ, ಲೋಕೋಪಯೋಗಿ, ಆರೋಗ್ಯ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದರು.

ಜೂನ್–ಜುಲೈನಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಕೂಡದು ಎಂದು ಆದೇಶಿಸಿದರು. ವಾರಕ್ಕೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯನ್ನು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕರೆಯಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಭೆಗೆ ಹಾಜರಾಗದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು ಸೂಚಿಸಿದ ಸಚಿವರು, ಪ್ರಗತಿ ಪರಿಶೀಲನಾ ಸಭೆಗೆ ಗೈರುಹಾ ಜರಾಗುವುದನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಗಮನ ಸೆಳೆದರು. ಜಿಲ್ಲೆಯಲ್ಲಿ ರೋಗ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ, ಮುಂಜಾಗ್ರತೆ ಬಗ್ಗೆ ಡಿಎಚ್‌ಒ ಬಳಿ ಮಾಹಿತಿ ನೀಡಿದರು.

ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿಡಿಯೊ ಪ್ರಾತ್ಯಕ್ಷಿಕೆ ನೀಡಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ‘ಭೂಪರಿವರ್ತನೆ ವಿಚಾ ರದಲ್ಲಿ ಸಾಮಾನ್ಯ ಜನರಿಗೆ ಬಹಳ ತೊಂದರೆಯಾಗಿದೆ. ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲೆಯಲ್ಲಿ ಸಂಭವಿಸಿದ ನಷ್ಟಕ್ಕೆ ವಿಶೇಷ ಅನುದಾನ ನೀಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಕಾಪು ಶಾಸಕ ಲಾಲಾಜಿ ಮೆಂಡನ್ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ‘ಕುಂದಾಪುರ ವಿಭಾಗದಲ್ಲಿ ಮೆಸ್ಕಾಂ ತುರ್ತು ಸ್ಪಂದನೆ ಮಾಡುತ್ತಿಲ್ಲ. ತೋಟಗಾರಿಕೆ ಬೆಳೆ, ರಬ್ಬರ್ ಪ್ಲಾಂಟೇಷನ್ ನಾಶವಾಗಿದ್ದು, ಶೀಘ್ರ ಪರಿಹಾರದ ಚೆಕ್ ವಿತರಿಸಲು‌’ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸದಸ್ಯ ಜನಾರ್ದನ ತೋನ್ಸೆ, ಸಿಇಒ ಶಿವಾನಂದ ಕಾಪಶಿ, ಸಹಾಯಕ ಆಯುಕ್ತ ಭೂಬಾಲನ್ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು.

‘ಸಮಸ್ಯೆಗಳಿಗೆ ತುರ್ತು ಸ್ಪಂದನೆ ಅಗತ್ಯ’

ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಉದಾರ ಮನೋಭಾವ ತೋರಿ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ನೊಂದವರಿಂದ ಅರ್ಜಿಗಳನ್ನು ನಿರೀಕ್ಷಿಸದೆ, ಅಧಿಕಾರಿಗಳೇ ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಸಾಂತ್ವನ ಹಾಗೂ ಪರಿಹಾರದ ಭರವಸೆ ನೀಡಬೇಕು. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅವರ ಅಭಿಪ್ರಾಯವನ್ನು ಪರಿಗಣಿಸಿ, ಇದರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.