ADVERTISEMENT

ಪಾಡಿಗಾರ ಶಾಲೆಗೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 8:22 IST
Last Updated 13 ಏಪ್ರಿಲ್ 2013, 8:22 IST

ಹೆಬ್ರಿ: ಒಂದನೇ ತರಗತಿ ಮೆಟ್ಟಿಲು ಹತ್ತಬೇಕಾದರೆ ನಾಲ್ಕೈದು ಕಿ.ಮೀ. ದೂರ ನಡೆದೇ ಸಾಗಬೇಕಿದ್ದ ಸಂದರ್ಭದಲ್ಲಿ ಹುಟ್ಟಿಕೊಂಡ ಗ್ರಾಮೀಣ ಪ್ರದೇಶದ ಪಾಡಿಗಾರದ ಬನ್ನಂಪಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಸುವರ್ಣ ಮಹೋತ್ಸವ ಸಂಭ್ರಮ.

50 ವರ್ಷ ಹಿಂದೆ ಪಾಡಿಗಾರ ಪರಿಸರದ ಮಕ್ಕಳು ಶಿಕ್ಷಣಕ್ಕಾಗಿ  ದೂರದ ಪೆರ್ಡೂರಿಗೆ ಹೋಗಬೇಕಿತ್ತು. ಈಗಿನಂತೆ ಬಸ್ ಸೌಕರ್ಯವೂ ಇಲ್ಲದ ಅಂದಿನ ದಿನಗಳಲ್ಲಿ ಮಕ್ಕಳ ಆ ಪರಿಸ್ಥಿತಿಯನ್ನು ಮನಗಂಡ ಶಿಕ್ಷಣ ಪ್ರೇಮಿ ಬಣ್ಣಂಪಳ್ಳಿ ಭುಜಂಗ ಹೆಗ್ಡೆ ಅವರು ಬನ್ನಂಪಳ್ಳಿಯ ಮನೆಯಲ್ಲೇ 1960ನೇ ಇಸವಿಯ ಅ. 5 ರಂದು ಏಕೋಪಾಧ್ಯಾಯ ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. 1972ರಲ್ಲಿ ಶಾಲೆ ಪಾಡಿಗಾರದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

1979 ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಮಟ್ಟಕ್ಕೇರಿತು.  ಆಸುಪಾಸಿನ ಹತ್ತಾರು ಹಳ್ಳಿಗಳ ಸಾವಿರಾರು ಮಕ್ಕಳಿಗೆ ವಿದ್ಯಾರ್ಜನೆ ನೀಡಿದ ಪಾಡಿಗಾರದ ಬಣ್ಣಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವ ಶನಿವಾರ ನಡೆಯಲಿದೆ. ಈ  ಸಂಭ್ರಮದ ನೆನಪಿಗೆ ವಿವಿಧ ಅಭಿವೃದ್ದಿ ಕೆಲಸಗಳನ್ನು ನಡೆಸಲಾಗಿದೆ. ಇದೇ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ರಜತ ಮಹೋತ್ಸವವೂ ನಡೆಯಲಿದೆ.

ವಿಜಯ ಬ್ಯಾಂಕ್ ನಿವೃತ್ತ ಹಿರಿಯ ಅಧಿಕಾರಿ ಬಿ.ಎಲ್.ಎನ್ ಹೆಗ್ಡೆ ಸ್ವಾಗತ ಗೋಪುರ ಲೋಕಾರ್ಪಣೆ ಮಾಡುವರು. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಶ್ಯಾನುಭಾಗ್ ಆವರಣ ಗೋಡೆ ಉದ್ಘಾಟಿಸುವರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬ್ರಹ್ಮಾವರ ವಲಯ ಅಧ್ಯಕ್ಷ ದಿನಕರ ಶೆಟ್ಟಿ ಕಂಪ್ಯೂಟರ್ ಉದ್ಘಾಟಿಸುವರು. ಕಾರ್ಕಳ ತಾಲ್ಲೂಕು ಅಧ್ಯಕ್ಷ ರವೀಂದ್ರ ಹೆಗ್ಡೆ ಉಪಸ್ಥಿತರಿರುವರು.

ಈ ಸಂಭ್ರಮಾಚರಣೆಗಾಗಿ ಸುವರ್ಣ ಮಹೋತ್ಸವ ಸಮಿತಿ ಯನ್ನು ರಚಿಸಲಾಗಿದೆ. ಗೌರವಾಧ್ಯಕ್ಷೆ ಶಾಂತಾ ಆರ್.ಶೆಟ್ಟಿ, ಅಧ್ಯಕ್ಷ ಪಳಜೆ ಶ್ರಿಪಾದ ರೈ, ಕಾರ್ಯಧ್ಯಕ್ಷ ಬಣ್ಣಂಪಳ್ಳಿ ಜಗದೀಶ ಹೆಗ್ಡೆ, ಉಪಾಧ್ಯಕ್ಷರಾದ ರಾಜು ಮೂಲ್ಯ, ವಿಜಯ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಸಮಾರಂಭದ ನೇತೃತ್ವ ವಹಿಸಿದ್ದಾರೆ.

ಮುಖ್ಯ ಶಿಕ್ಷಕಿ ಪದ್ಮಲತಾ,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಖರ, ವಿದ್ಯಾರ್ಥಿ ನಾಯಕ ರಕ್ಷಿತ್, ಹಳೇ ವಿದ್ಯಾರ್ಥಿಗಳು,ಸುವರ್ಣ ಮಹೋತ್ಸವ ಸಮಿತಿ, ಶಾಲಾಭಿವೃದ್ದಿ ಸಮಿತಿಯ ಸದಸ್ಯ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಸಮೂಹ ಸಂಭ್ರಮದ ಸುವರ್ಣ ಮಹೋತ್ಸವಕ್ಕಾಗಿ ಸಿದ್ಧತೆ ನಡೆಸಿದ್ದಾರೆ.  ಸುವರ್ಣ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಹಳೇ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.